ಆಧಾರ್ ತಿದ್ದುಪಡಿಗಾಗಿ ಕೊರೊನಾ ನಿಯಮಾವಳಿ ಗಾಳಿಗೆ ತೂರಿದ ಸಾರ್ವಜನಿಕರು
ರಾಣಿಬೆನ್ನೂರ 17: ನಗರದ ತಹಶೀಲ್ದಾರ ಕಛೇರಿ ಆವರಣದಲ್ಲಿ ಆಧಾರ್ ತಿದ್ದುಪಡಿಗಾಗಿ ನಿತ್ಯವೂ ನೂರಾರು ನಾಗರೀಕರು ನಾ-ಮುಂದೆ, ತಾ-ಮುಂದೆ ಎಂದು ಸರದಿ ಸಾಲಿನಲ್ಲಿ ನಿಂತು ತಿದ್ದುಪಡಿ ಮಾಡಿಸಿಕೊಳ್ಳಲು ಜೋತು ಬಿದ್ದಿರುವುದು ನಿತ್ಯವೂ ಕಾಣುವಂತಾಗಿದೆ.
ಸರ್ಕಾರದ ಯಾವುದೇ ನಿಯಮಾವಳಿಗಳನ್ನು ಅನುಸರಿಸದೇ, ಎಲ್ಲವನ್ನೂ ಗಾಳಿಗೆ ತೂರಿ ಸರದಿಯಲ್ಲಿ ನಿಲ್ಲುವ ನಾಗರೀಕರು ಕರೋನಾ ತೊಲಗಿ ಬಿಟ್ಟಿದೆ ಎನ್ನುವ ಭ್ರಮೆಯಲ್ಲಿ ಇದ್ದಾರೆ ಎಲನ್ನುವಂತೆ ಭಾಸವಾಗುತ್ತಲಿದೆ. ಸರ್ಕಾರ ಅನೇಕ ಮುಂಜಾಗೃತಾ ಕ್ರಮ ಕೈಗೊಂಡು ಸ್ಯಾನಿಟೈಸರ್, ಮಾಸ್ಕ್ಗಳ ಉಪಯೋಗಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಿತ್ಯದ ಎಲ್ಲ ವ್ಯಾಪಾರ ವಹಿವಾಟು ಮತ್ತು ಖರೀದಿ ಯಲ್ಲಿ ತೊಡಗಬೇಕು ಎನ್ನುವ ಕಟ್ಟು ನಿಟ್ಟಿನ ಆದೇಶವಿದ್ದರೂ ಆಧಾರ್ ತಿದ್ದುಪಡಿಗಾಗಿ ಎಲ್ಲವನ್ನು ಗಾಳಿಗೆ ತೂರಿ ಆಧಾರ್ ತಿದ್ದುಪಡಿಯೇ ನಮ್ಮ ಮುಖ್ಯ ಕರ್ತವ್ಯವೆಂದು ಕಛೇರಿಗಳ ಮುಂಭಾಗ ಮುಗಿಬಿಳುತ್ತಿದ್ದಾರೆ.
ಇದರಿಂದ ಕರೋನಾ ಸೋಂಕು ಪುನ: ಹರಡುವ ಭೀತಿಯಲ್ಲಿರುವ ಕೆಲವರು ಸರದಿ ಸಾಲಿನಲ್ಲಿ ತಮ್ಮ ಕೈಚೀಲ, ಪುಸ್ತಕ, ಪಾದರಕ್ಷೆ ಮತ್ತಿತರೆ ವಸ್ತುಗಳನ್ನು ಸರದಿಯಲ್ಲಿ ಇಡುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಇದರಿಂದ ತಾಲೂಕಾಡಳಿತಕ್ಕೆ ಆತಂಕದ ಸ್ಥಿತಿ ನಿರ್ಮಾಣವಾಗುತ್ತಿದೆ. ಆಡಳಿತ ಕೇವಲ ಎರಡು ಮಾನೀಟರ್ಗಳ ಮೂಲಕ ಆಧಾರ್ ತಿದ್ದುಪಡಿ, ಜಾತಿ-ಆದಾಯ ಪ್ರಮಾಣ ಪತ್ರ ಇನ್ನು ಕೇಲವು ಸೇವೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ.
ತಕ್ಷಣವೇ ಬೇರೆ-ಬೇರೆ ಸ್ಥಳಗಳಲ್ಲಿ ಆಧಾರ್ ತಿದ್ದುಪಡಿ ಸೇವೆಯನ್ನು ಒದಗಿಸಲು ಮತ್ತಷ್ಟು ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗಾಗುವ ತೊಂದರೆಯನ್ನು ತಪ್ಪಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಆಡಳಿತಕ್ಕೆ ಆಗ್ರಹಿಸಿದ್ದಾರೆ.