ರಾಷ್ಟ್ರೀಯ

ಪುಲ್ವಾಮದಲ್ಲಿ ಗುಂಡಿನ ಚಕಮಕಿ; ತಪ್ಪಿಸಿಕೊಳ್ಳುವಲ್ಲಿ ಉಗ್ರರು ಯಶಸ್ವಿ

ಪುಲ್ವಾಮದಲ್ಲಿ ಗುಂಡಿನ ಚಕಮಕಿ; ತಪ್ಪಿಸಿಕೊಳ್ಳುವಲ್ಲಿ ಉಗ್ರರು ಯಶಸ್ವಿ

ಶ್ರೀನಗರ, ನವೆಂಬರ್.20: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಸಣ್ಣ ಪ್ರಮಾಣದ ಗುಂಡಿನ ಚಕಮಕಿ ನಡೆದಿದ್ದು, ಉಗ್ರರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರಾಷ್ಟ್ರೀಯ ರೈಫಲ್ಸ್, ಜಮ್ಮು ಕಾಶ್ಮೀರ ಪೊಲೀಸ್ ನ ವಿಶೇಷ ಕಾರ್ಯಾಚರಣೆ ಪಡೆ ಮತ್ತು ಸಿಆರ್ ಪಿಎಫ್ ಜಂಟಿಯಾಗಿ ಪುಲ್ವಾಮದ ಪರಿಗಮ್ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಗುರುವಾರ ಸಂಜೆ ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ, ಗ್ರಾಮದ ನಿರ್ದಿಷ್ಟ ಪ್ರದೇಶಕ್ಕೆ ಭದ್ರತಾ ಪಡೆ ತಲುಪಿದಾಗ, ಅಡಗಿ ಕುಳಿತಿದ್ದ ಉಗ್ರರು ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದರು. ಈ ವೇಳೆ ಎನ್ ಕೌಂಟರ್ ನಡೆಯಿತು ಎಂದು ಅವರು ತಿಳಿಸಿದ್ದಾರೆ.

ಆದಾಗ್ಯೂ, ಎನ್ ಕೌಂಟರ್ ನಂತರ ಈ ಪ್ರದೇಶದಲ್ಲಿ ಕೆಲವು ಪ್ರತಿಭಟನೆಗಳು ನಡೆದವು ಎಂದು ಅಧಿಕೃತ ಮೂಲಗಳು ತಿಳಿಸಿವೆ. ನಂತರ ಭದ್ರತಾ ಪಡೆಗಳು ಮನೆ ಮನೆಗೆ ತೆರಳಿ ಶೋಧ ನಡೆಸಿದರೂ ಉಗ್ರರು ಸಿಕ್ಕಿಲ್ಲ. ಕತ್ತಲೆಯಲ್ಲಿ ಉಗ್ರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸುದ್ದಿ ಓದಿ