ಬೈಕ್ನಲ್ಲಿ ಅಡಗಿದ ಹಾವು ಚಲಾಯಿಸುವಾಗ ಪ್ರತ್ಯಕ್ಷ
ಲೋಕದರ್ಶನ ವರದಿ
ಬೈಲಹೊಂಗಲ 29: ಸರಸರನೆ ಹರಿದು ಹೋಗುವ ಹಾವಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಬೈಕನಲ್ಲಿ ಹೋಗುವಾಗ ಒಮ್ಮೆಲೆ ಬೈಕ್ ಡುಮ ಒಳಗಿಂದ ಹಾವು ಕಂಡು ಬಿಟ್ಟರೆ ಹೇಗಾಗಬಹುದು? ಒಮ್ಮೆಲೆ ಭಯ, ಅದರಲ್ಲಿಯೂ ವಾಹನ ಚಲಾಯಿಸುತ್ತಿರುವಾಗ ಹಾವು ಎಂದಾಕ್ಷಣ ಜೀವವೇ ಬಾಯಿಗೆ ಬಂದ ಹಾಗೆ.
ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ಸಂಜೆ ಗ್ರಾಮೀಣ ಪ್ರದೇಶದ ವ್ಯಕ್ತಿಯೊಬ್ಬರು ಬಜಾರ ರಸ್ತೆಯಲ್ಲಿ ಸಾಗುತ್ತಿರುವಾಗ ಕಡಬಿ ಗಲ್ಲಿ ಸನಿಹ ಬೈಕನಲ್ಲಿ ಇದ್ದ ಉರಗಮಂಡಲ(ಕೆರೆ ಹಾವು) ಬೈಕ ಡುಮ ಒಳಗಿಂದ ಎದುರಿಗೆ ಪ್ರತ್ಯಕ್ಷವಾಗಿದೆ. ಸವಾರ ಇನ್ನೆನು ಬೈಕ ನಿಲ್ಲಿಸಿ ಬದುಕಿದೆಯಾ ಬಡ ಜೀವ ಎಂದು ಚಂಗನೆ ಹಾರಿ ಬೈಕ್ ಕೆಡವಿದನು. ಸುಮಾರು ಅರ್ಧ ಗಂಟೆ ಬೈಕನಲ್ಲಿ ಅಡಗಿದ್ದ ಹಾವನ್ನು ಅಯ್ಯಪ್ಪ ಮಾಲಾಧಾರಿ ವೃದ್ಧರೊಬ್ಬರು ನಿಧಾನವಾಗಿ ಹಾವನ್ನು ಹೊರತೆಗೆದರು. ಬೈಕ್ ಸವಾರ ವೃದ್ಧರಿಗೆ ಧನ್ಯವಾದ ಹೇಳಿ ಉಸಪ್ಪ ಎಂದು ಅಲ್ಲಿಂದ ಕಾಲ್ಕಿತ್ತ. ಈ ಸಂದರ್ಭದಲ್ಲಿ ಬಜಾರ ರಸ್ತೆಯಲ್ಲಿ ತುಸು ಸಂಚಾರ ವ್ಯತ್ಯಯ ಉಂಟಾಯಿತು. ಸವಾರರೇ ಚಳಿಗಾಲವಿದ್ದರಿಂದ ನೀವು ನಿಮ್ಮ ಬೈಕಗಳನ್ನು ಹತ್ತುವ ಮುನ್ನ ಒಮ್ಮೆ ಬೈಕನ್ನು ಪರಿಶೀಲಿಸಿ ಹತ್ತುವುದು ಒಳ್ಳೆಯದು