ಎಲ್ಲಾ ಅಂಗಗಳಿಗೆ ಕಣ್ಣು ಪ್ರಮುಖ ಅಂಗ ನಿರ್ಲಕ್ಷ್ಯ ಸಲ್ಲದು: ಟಿ. ವೀರಣ್ಣ
ರಾಣಿಬೆನ್ನೂರು 11: ಮಾನವನ ದೇಹದ ಎಲ್ಲಾ ಅಂಗಗಳಲ್ಲಿ ಕಣ್ಣು ಬಹು ಪ್ರಮುಖ ಅಂಗವಾಗಿ ಪರಿಗಣಿತವಾಗಿದೆ. ವಯೋ ಸಹಜವಾಗಿ ಕಣ್ಣಿನ ದೃಷ್ಠಿ ದೋಷ ಸಹಜ. ಆದರೆ ಬದುಕಿನೂದ್ದಕ್ಕೂ ಉತ್ತಮ ಆಹಾರ, ಕಣ್ಣುಗಳ ಬಗ್ಗೆ ನಿರ್ಲಕ್ಷ್ಯತನ ತೋರದೆ ಮೇಲಿಂದ ಮೇಲೆ ತಪಾಷಣೆಗೆ ಒಳಪಟ್ಟರೆ ಆಗಿರುವ ತೊಂದರೆಯನ್ನು ನಿವಾರಿಸಕೊಳ್ಳಬಹುದಾಗಿದೆ. ಅದಕ್ಕಾಗಿ ಶಂಕರ್ ಕಣ್ಣಿನ ಆಸ್ಪತ್ರೆ ಸ್ಥಳೀಯ ಲಯನ್ಸ್ ಸಂಸ್ಥೆ, ಸ್ವಾಕರವೇ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಂದತ್ವ ನಿವಾರಣಾ ಸಮಿತಿಯು ಪ್ರತಿ ಹಂತದಲ್ಲಿಯೂ ಉಚಿತವಾಗಿ ಇಂತಹ ಶಿಬಿರಗಳನ್ನು ಆಯೋಜಿಸುವುದರ ಮೂಲಕ ಬಡವರ, ದೀನದಲಿತರ, ಅಲ್ಪ ಸಂಖ್ಯಾತರ ನಿರ್ಗತಿಕರ ಸೇವೆಯಲ್ಲಿ ತೊಡಗಿಸಿಕೊಂಡು ತನ್ನ ಮಾನವೀಯ ಸೇವಾ ಕಾರ್ಯ ನೆರವೇರಿಸುತ್ತಲಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬ ನಾಗರೀಕರು ಪಡೆಯಲು ಮುಂದಾಗಬೇಕು ಎಂದು ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷ ಟಿ ವೀರಣ್ಣ ಕರೆ ನೀಡಿದರು.
ಅವರು ಶನಿವಾರ ಮೇಡ್ಲೇರಿ ರಸ್ತೆಯ ಲಯನ್ಸ್ ಶಾಲಾ ಆವರಣದಲ್ಲಿ ವಿವಿಧ ಸಂಘಟನೆಗಳು ಸಂಯುಕ್ತವಾಗಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಷಣೆ ಮತ್ತು ಅಗತ್ಯವಿರುವವರಿಗೆ ಶಸ್ತ್ರ ಚಿಕಿತ್ಸಾ ಶಿಬಿರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿ ಇದ್ದವರು ಇಲ್ಲದವರಿಗೆ ಸಹಾಯ ಮಾಡುವುದೇ ನಿಜವಾದ ಮಾನವೀಯ ಧರ್ಮವಾಗಿದೆ. ಸರ್ಕಾರ ಕೊಡಮಾಡುವ ಯಾವುದೇ ಉಚಿತ ಸೇವೆಗಳು ಅವು ಸಮರ್ಕವಾಗಿ ಜನ ಸಾಮಾನ್ಯರಿಗೆ ತಲುಪಬೇಕಾದರೆ ಸ್ಥಳೀಯವಾಗಿರುವ ಸಂಘ ಸಂಸ್ಥೆಗಳ ಪಾತ್ರ ಅತ್ಯಂತ ಪ್ರಮುಖ ವಾಗಿವೆ ಎಂದ ಅವರು, ಸಮಾಜಮುಖಿ ಸೇವೆಯಲ್ಲಿ ಲಯನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆಯು ಕಳೆದ 45 ವರ್ಷಗಳಿಂದ ಮಾಡುತ್ತಾ ಬರಲಾಗಿದೆ. ಸಂಸ್ಥೆ ಹಮ್ಮಿಕೊಳ್ಳುವ ಯಾವುದೇ ಸೇವಾ ಕಾರ್ಯಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಂಡಾಗ ಮಾತ್ರ ಕಾರ್ಯಕ್ರಮ ಸಂಘಟಿಕರಿಗೆ ಅತ್ಯಂತ ಮಾನಸಿಕ ತೃಪ್ತಿ ತರಲಿದೆ ಎಂದರು.
ಎಂ.ಜಿ. ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ವರ್ತಕ ಮಲ್ಲೇಶಪ್ಪ ಅರಕೇರಿ ಅವರು, ಶಿಬಿರ ಉದ್ಘಾಟಿಸಿ ಚಾಲನೆ ನೀಡಿ, ತಮ್ಮ ಶುಭ ಸಂದೇಶ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸದಸ್ಯ ಪ್ರಭುಲಿಂಗಪ್ಪ ಹಲಗೇರಿ ಅವರು, ಲಯನ್ಸ್ ಸೇವಾ ಸಂಸ್ಥೆ ತನ್ನದೆ ಯಾದ ಉದ್ದೇಶವನ್ನು ಇಟ್ಟುಕೊಂಡು ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಜನ ಸಾಮಾನ್ಯರ ಸೇವೆಯಲ್ಲಿ ತೃಪ್ತಿ ಕಾಣುತ್ತಲಿದೆ. ಪ್ರತಿ ತಿಂಗಳ 2ನೇ ಶನಿವಾರ ದಿವಸ ಉಚಿತ ಕಣ್ಣಿನ ತಪಾಷಣಾ ಶಿಬಿರ ನಡೆಯಲಿದೆ. ಅದಕ್ಕಾಗಿ ಬಿಪಿಎಲ್ ಕಾರ್ಡ್ ಹೊಂದಿದವರು ಈ ಉಚಿತ ತಪಾಷಣೆ ಲಾಭ ಪಡೆದುಕೊಂಡು ಅಗತ್ಯವಿದ್ದಲ್ಲಿ. ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಯಾವುದೇ ವೆಚ್ಚ ಭರಿಸಬೇಕಾದ ಅಗತ್ಯವಿಲ್ಲ. ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿ ಪುನಃ ನಗರಕ್ಕೆ ಕರೆ ತಂದು ಬಿಡಲಾಗುವುದು. ಗ್ರಾಮೀಣ ಪ್ರದೇಶದ ನಾಗರೀಕರು ಈ ಕುರಿತು ನಿಮ್ಮ ಸುತ್ತಮುತ್ತಲಿನ ನಾಗರೀಕರಲ್ಲಿ ಜಾಗೃತಿ ಗೊಳಿಸಿ ಮಾಹಿತಿ ವದಗಿಸಿ ಚಿಕಿತ್ಸೆ ಪಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಹಿರಿಯ ಗಣ್ಯರಾದ ಕೆ.ಸಿ.ಪಾಟೀಲ, ಬಸವರಾಜ ಎನ್ ಪಾಟೀಲ, ಅಶೋಕ ಹೊಟ್ಟಿಗೌಡ್ರ, ಶಿವಪ್ಪ ಗುರಿಕಾರ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ರಾಜು ಅಡಿವೆಪ್ಪನವರ, ಜಯಣ್ಣ ಮುಚಡಿ, ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ಶಂಕರ್ ನಾಯಕ್, ನೇತ್ರ ತಜ್ಞರಾದ ಅನುರಾಧ ಕುಲಕರ್ಣಿ, ಶರಣ್ ಚೌಧರಿ, ಪ್ರಕಾಶ ಸಣ್ಣಮನಿ, ಜಿಲ್ಲಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎಂ.ರಾಜಶೇಖರ, ಎಲ್.ಜಿ.ಶೆಟ್ರ ಸೇರಿದಂತೆ ಮತ್ತಿತರ ಗಣ್ಯರು, ಸದಸ್ಯರು ಉಪಸ್ಥಿತರಿದ್ದರು. ಉಮಾ ಮುದಗಲ್ಮಠ ಪ್ರಾರ್ಥಿಸಿದರು. ಆರ್.ವಿ.ಸುರಗೊಂಡ ಸ್ವಾಗತಿಸಿ, ನಿರೂಪಿಸಿ, ಎಂ.ಹೆಚ್.ಪಾಟೀಲ ವಂದಿಸಿದರು. ಶಿಬಿರದಲ್ಲಿ 300 ಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡು ತಪಾಷಣೆಗೊಳಪಟ್ಟರು.