ಶನೈಶ್ಚರ ಮಂದಿರದ ದುರ್ಗಾ-ಮೃತ್ಯುಂಜಯ ಮೂರ್ತಿಗಳ ವಿಸರ್ಜನೆ
ರಾಣಿಬೆನ್ನೂರ 10: ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರದ ಆವರಣದಲ್ಲಿ 9ನೇ ವರ್ಷದ ಶನೈಶ್ಚರ ಸ್ವಾಮಿಯ ವಾರ್ಷಿಕೋತ್ಸವದ ಅಂಗವಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಹಾಗೂ ಪ್ರದೇಶಾಭಿವೃದ್ಧಿ ಆಗಾಗಿ ನಿರಂತರ 384 ದಿನಗಳ ಕಾಲ ನಡೆದ ವೈವಿಧ್ಯಮಯ ಪೂಜಾ ಹಾಗೂ ಧಾರ್ಮಿಕ ಮತ್ತಿತರ ಕಾರ್ಯಕ್ರಮಗಳು ಇದೀಗ ಇತಿಹಾಸದ ಪುಟ ಸೇರಿದ್ದು, ಹೋಮ, ಜಪ, ದೀಪದುರ್ಗಾ, ಮೃತ್ಯುಂಜಯ ಜಪ, ಮಂತ್ರದ ಮೂಲಕ 393ದಿನಗಳ ಕಾಲ ಪೂಜೆಗೊಂಡ ದುರ್ಗಾ ಮೂರ್ತಿ ಮತ್ತು ಮೃತ್ಯುಂಜಯ ಮಣ್ಣಿನ ಮೂರ್ತಿಗಳನ್ನು ಕುದರಿಹಾಳ ಬಳಿ ಇರುವ ತುಂಗಭದ್ರ ನದಿಯಲ್ಲಿ ನೂರಾರು ಭಕ್ತರ ಮಧ್ಯ ಅಂತಿಮ ವಿಧಿವಿಧಾನಗಳೊಂದಿಗೆ ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.
ಡಿ. 2020ರ ನವಂಬರ 11ರಂದು ಪೂಜೆಗಾಗಿ ಪ್ರತಿಷ್ಠಾಪಿಸಲಾಗಿದ್ದ ಈ ಎರಡೂ ಮೂರ್ತಿಗಳನ್ನು ಬುಧವಾರ ರಾತ್ರಿಯಂದು ಸಕಲ ವಾಧ್ಯ ಮೇಳ, ಭಜನೆಯೊಂದಿಗೆ ಮೆರವಣಿಗೆ ಮೂಲಕ ಕೊಂಡೊಯ್ದು ವಿಸರ್ಜನೆ ಮಾಡಲಾಯಿತು. ಶನೈಶ್ಚರ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದುರ್ಗಾ ಮೂರ್ತಿಯಿಂದ ಒಟ್ಟು 6ಲಕ್ಷ ಜಪ, ಮೃತ್ಯುಂಜಯ ಮೂರ್ತಿಯಿಂದ 16ಲಕ್ಷ ಮಂತ್ರ, ಮಹಾಮೃತ್ಯುಂಜಯದಿಂದ 1ಕೋಟಿ ಜಪಗಳನ್ನು ಭಕ್ತರಿಂದ ಮಾಡಿಸಲಾಗಿತ್ತು. ಮೂರ್ತಿಗಳ ವಿಸರ್ಜನೆಗಿಂತ ಮೊದಲು ಎರಡೂ ಮೂರ್ತಿಗಳಿಗೆ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿತ್ತು.
ವಿಸರ್ಜನೆಗೆ ಚಾಲನೆಗೊಳಿಸಿದ ಶನೈಶ್ಚರ ಮಂದಿರದ ಶಿವಯೋಗಿ ಶಿವಚಾರ್ಯ ಮಹಾಸ್ವಾಮಿಗಳು ಮಾತನಾಡಿ ಕಳೆದ 393 ದಿನಗಳಿಂದ ಪ್ರತಿದಿನ ನಡೆಯುತ್ತಿದ್ದ ಈ ಮೂರ್ತಿಗಳ ಪೂಜೆ ಇಂದಿಗೆ ಕೊನೆಗೊಂಡಿದ್ದು, ಮನಸ್ಸಿಗೆ ಖೇಧ ಎನಿಸಿದೆ, ಆದರೂ ಸಹ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಮೂತಿಗಳನ್ನು ಹೇಗೆ ಸ್ವಾಗತಿಸಲಾಗಿತ್ತೋ ಹಾಗೆಯೇ ಇದೀಗ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ವಿಸರ್ಜನೆಗೆ ಮುಂದಾಗಬೇಕಿದ್ದು ಅನಿವಾರ್ಯವಾಗಿದೆ ಎಂದು ಶ್ರೀಗಳು ಮಾತು ಮುಂದುವರೆಸಲಾಗದೇ ಗದ್ಗದಿತರಾದರು.
ಸ್ವಾಗತ ಸಮಿತಿ ಅಧ್ಯಕ್ಷ ಎಸ್ಎಸ್ ರಾಮಲಿಂಗಣ್ಣನವರ, ಬಸವರಾಜ ಸವಣೂರ, ರವೀಂದ್ರಗೌಡ ಪಾಟೀಲ, ಸಿದ್ದಪ್ಪ ಚಿಕ್ಕಬಿದರಿ, ಡಿಳ್ಳೆಪ್ಪ ಸತ್ಯಪ್ಪನವರನ ಸೇರಿದಂತೆ ಸಮಿತಿಯ ಸದಸ್ಯರುಗಳು, ಶಾಸ್ರ್ತೀಗಳು, ಪಾಠಶಾಲೆಯ ವಟುಗಳು, ಮಹಿಳೆಯರು ಭಕ್ತರು ಮತ್ತಿತರರು ಇದ್ದರು. ಶನೈಶ್ಚರ ಮಂದಿರದಿಂದ ಅಲಂಕೃತಗೊಂಡ ವಾಹನದ ಮೂಲಕ ಗಂಗಾಪೂರ, ಕುದರಿಹಾಳ ಗ್ರಾಮದ ಮೂಲಕ ಹಾಯ್ದು ಅಂತಿಮವಾಗಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿಸಿ ತುಂಗಭದ್ರ ನದಿಯಲ್ಲಿ ವಿಸರ್ಜಿಸಲಾಯಿತು.