ರಾಷ್ಟ್ರೀಯ

ಹಿಮಾಚಲ ಪ್ರದೇಶ : ಆರು ತಿಂಗಳ ಹಸುಗೂಸಿನ ನೇತ್ರದಾನ!

ಹಿಮಾಚಲ ಪ್ರದೇಶ : ಆರು ತಿಂಗಳ ಹಸುಗೂಸಿನ ನೇತ್ರದಾನ!

ಕಾಂಗ್ರಾ, 18: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆರು ತಿಂಗಳ ಹೆಣ್ಣು ಮಗುವನ್ನು ಕಳೆದುಕೊಂಡ ದಂಪತಿ, ಆ ಕೂಸಿನ ಕಣ್ಣನ್ನು ದಾನ ಮಾಡಿರುವ ಮನಕಲಕುವ ಹಾಗೂ ಶ್ಲಾಘನೀಯ ಘಟನೆ ನಡೆದಿದೆ.

ಹಿಮಾಚಲ ಪ್ರದೇಶದ ಡಾ.ರಾಜಿಂದರ್ ಪ್ರಸಾದ್ ಸರ್ಕಾರಿ ವೈದ್ಯಕೀಯ ಕಾಲೇಜು ಕಣ್ಣಿನ ಬ್ಯಾಂಕ್‌ಗೆ ನೇತ್ರ ದಾನ ಮಾಡಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅತುಲ್ ಚೌಧರಿ ಮತ್ತು ಅವರ ಡಾ.ರಾಜಿಂದರ್ ಪ್ರಸಾದ್ ಸರ್ಕಾರದ ಸ್ಟಾಫ್ ನರ್ಸ್ ಆಗಿರುವ ಪತ್ನಿ ಮಿನಾಕ್ಷಿ ಚೌಧರಿ ಈ ದಿಟ್ಟ ನಿರ್ಣಯ ಕೈಗೊಂಡ ದಂಪತಿ.

ಕೂಸು ಜನಿಸಿದ ಸುಮಾರು ಆರು ತಿಂಗಳವರೆಗೆ ಎಲ್ಲವೂ ಉತ್ತಮವಾಗಿ ನಡೆಯಿತು ಆದರೆ ನಂತರ ಮಗುವಿಗೆ ಉಸಿರಾಟದ ಸಮಸ್ಯೆ ಉಂಟಾಯಿತು. ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇದೇ ನವೆಂಬರ್ 15 ರಂದು ಮಗು ಕೊನೆಯುಸಿರೆಳೆದಿದೆ.

 ಈ ವೇಳೆ ಆಕೆಯ ಅಂಗಗಳನ್ನು ದಾನ ಮಾಡಲಿ ದಂಪತಿ ನಿರ್ಧರಿಸಿದರಾದರೂ,  ಅಂಗಾಂಗಗಳನ್ನು ದಾನ ಮಾಡಲು ಯಾವುದೇ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲದ ಕಾರಣ, ಕಣ್ಣುಗಳನ್ನು ದಾನ ಮಾಡಲು ತೀರ್ಮಾನಿಸಿದ್ದಾರೆ.

“ನಮ್ಮ ಪುತ್ರಿ ಕನಿಷ್ಠ ಯಾರೊಬ್ಬರ ಕಣ್ಣುಗಳ ಮೂಲಕವಾದರೂ ಜೀವಂತವಾಗಿರುತ್ತಾಳೆ”  ಎಂದು ಅತುಲ್ ಚೌದರಿ ಹೇಳಿದ್ದಾರೆ.  ಇಂತಹ ಪರಿಸ್ಥಿತಿ ಎದುರಾದಾಗ ಜನರು ಮುಂದೆ ಬಂದು ಅಂಗಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡುವಂತೆ ದಂಪತಿ ಒತ್ತಾಯಿಸಿದ್ದಾರೆ.

ಸುದ್ದಿ ಓದಿ