ಸಾಲದ ಭಾದೆ: ಮನ ನೊಂದ ರೈತ ನೇಣಿಗೆ ಶರಣು
ರಾಣೀಬೆನ್ನೂರ 09:- ಸಾಲದ ಭಾದೆಗೆ ಸಿಲುಕಿದ ರೈತನೋರ್ವನು ಮನ ನೊಂದು ಪ್ಲೋರ್ ಮಿಲ್ನಲ್ಲಿಯೇ ನೇಣಿಗೆ ಶರಣಾದ ದುರಂತ ಘಟನೆ ಇಲ್ಲಿನ ಹಳೇಅಂತರವಳ್ಳಿ ರಸ್ತೆಯ ದೇವಿಕಾ ಶಾಲೆಯ ಹತ್ತಿರ ಶುಕ್ರವಾರ ಮುಂಜಾನೆ ಸಂಭವಿಸಿದೆ. ಕೃಷಿಕ ಬಸವ ರಾಜ ಹುಗ್ಗಿ ಎಂಬಾತನೇ ಸಾವಿಗೆ ಶರಣಾದ ನತದೃಷ್ಟ. ಮೃತ ಬಸವರಾಜನು ಸರ್ಕಾರಿ ಬ್ಯಾಂಕುಗಳಲ್ಲಿ 3ಲಕ್ಷಕ್ಕೂ ಹೆಚ್ಚು ಹಾಗೂ ಇತರೆ ಖಾಸಗಿಯಾಗಿ ಅದಿಕ ಪ್ರಮಾಣದಲ್ಲಿ ಸಾಲ ಮಾಡಿದ್ದನೆಂದು ಹೇಳಲಾಗಿದೆ.
ಸಾಲ ತೀರಿಸುವ ಬಗೆ ಹೇಗೆಂದು ಮಾನಸಿಕವಾಗಿ ಬಳಲುತ್ತಿದ್ದನೆಂದು ಹೇಳಲಾಗಿದ್ದು ಈತನ ಸಾವಿನಿಂದ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ನಗರ ಠಾಣೆಯ ಆರಕ್ಷಕರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಗರಸಭಾ ಸದಸ್ಯ ಪ್ರಕಾಶ ಬುರಡಿಕಟ್ಟಿ, ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಸೇರಿದಂತೆ ಸ್ಥಳೀಯ ಮುಖಂಡರು ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸುವುದಾಗಿ ಭರವಸೆ ನೀಡಿದ್ದಾರೆ.