ಸೌಂದತ್ತಿ

ಗಬ್ಬೆದ್ದು ನಾರುತ್ತಿದೆ ಹಂಚಿನಾಳ ಶಾಲೆಯ ವಾತಾವರಣ : ವಿದ್ಯಾರ್ಥಿ, ಶಿಕ್ಷಕರಿಗೆ ಶಿಕ್ಷಯಾದ ಉಸಿರುಗಟ್ಟಿದ ವಾತಾವರಣ * ಗ್ರಾಪಂ ನಿರ್ಲಕ್ಷ್ಯಕ್ಕೆ ಅಸಮಾಧಾನ

ಗಬ್ಬೆದ್ದು ನಾರುತ್ತಿದೆ ಹಂಚಿನಾಳ ಶಾಲೆಯ ವಾತಾವರಣ  : ವಿದ್ಯಾರ್ಥಿ, ಶಿಕ್ಷಕರಿಗೆ ಶಿಕ್ಷಯಾದ ಉಸಿರುಗಟ್ಟಿದ ವಾತಾವರಣ * ಗ್ರಾಪಂ ನಿರ್ಲಕ್ಷ್ಯಕ್ಕೆ ಅಸಮಾಧಾನ

ಲೋಕದರ್ಶನ ವರದಿ 


ಸವದತ್ತಿ 05: ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್ ಸುತ್ತ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಶಾಲಾ ಆವರಣವೆಲ್ಲ ಗಬ್ಬೆದ್ದು ನಾರುತ್ತಿದ್ದು ಉಸಿರುಗಟ್ಟಿದ ವಾತಾವರಣದಲ್ಲಿ ವಿದ್ಯಾರ್ಥಿಗಳು ಕಲಿಯಬೇಕಾದ ಮತ್ತು ಶಿಕ್ಷಕರು ಅಂಥದ್ದರಲ್ಲೇ ಕಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. 

ಇದರಿಂದಾಗಿ ಮಕ್ಕಳಲ್ಲಿ ರೋಗದ ಭೀತಿಯು ಕಾಡುತ್ತಿದ್ದು ಮುಂದೊಂದು ದಿನ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂಬ ಆತಂಕ ಪಾಲಕ ಶಿಕ್ಷಕರನ್ನು ಕಾಡುತ್ತಿದೆ. 


ಶಾಲೆಯಲ್ಲಿ ಒಟ್ಟು 255 ವಿದ್ಯಾರ್ಥಿಗಳಿದ್ದು ಪ್ರತಿ ದಿನ ಮೂಗು ಮುಚ್ಚಿಕೊಂಡು ಶಿಕ್ಷಣ ಕಲೆಯಬೇಕಾದ ಸ್ಥಿತಿ ಮಕ್ಕಳಿಗೆ ಹಾಗೂ ಪಾಠ ಹೇಳಬೇಕಾದ ಶಿಕ್ಷಕರಿಗೂ ಒಂದು ತರಹ ಶಿಕ್ಷೆಯೇ ಆಗಿದೆ. ಇದರಿಂದ ಶಾಲೆಗೆ ಕಲಿಯಲು ಬರುವ ಮಕ್ಕಳ ಸಂಖ್ಯೆಯುಲ್ಲಿ ಇಳಿಕೆ ಕಂಡುಬರುತ್ತಿದೆ. 


ಉಸಿರುಗಟ್ಟುವ ಕೊಠಡಿಯಲ್ಲಿ ವಿದ್ಯಾರ್ಥಿಗಳು: ಶಾಲೆಯ ಕಾಂಪೌಂಡಗೆ ಹೊಂದಿಕೊಂಡು ಸಾರ್ವಜನಿಕರು ನಿತ್ಯ ಬಹಿರ್ದೆಸೆಗೆ ಹೋಗುತ್ತಿರುವುದರಿಂದ ಶಾಲಾ ಕಿಟಕಿಗಳ ಮೂಲಕ ದುರ್ನಾತ ಕೊಠಡಿ ಒಳಗೆ ಹರಡುತ್ತಿದೆ, ಶಿಕ್ಷಕನ ಶಿಕ್ಷಣಕ್ಕಿಂತ ದುರ್ವಾಸನೆಯ ಶಿಕ್ಷೆ ಹೆಚ್ಚಾಗಿದ್ದು ಕಿಟಕಿ ತೆರೆಯದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಕೊಠಡಿಯೊಳಗೆ ಸರಿಯಾದ ಬೆಳಕು ಗಾಳಿಯಿಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಉಸಿರುಗಟ್ಟಿದ ವಾತಾವರಣದಲ್ಲಿ ಶಿಕ್ಷಣ ಪಡೆಯಬೇಕಾಗಿದೆ ಅನಿವಾರ್ಯತೆ ನಿರ್ಮಾಣವಾಗಿದೆ. 


ಗ್ರಾಮ ಪಂಚಾಯತಿ ನಿರ್ಲಕ್ಷ್ಯ: 


ಸ್ವಚ್ಛ ಭಾರತ ಹಾಗೂ ಬಯಲು ಬಹಿರ್ದೆಸೆ ಮುಕ್ತ ಮಾಡುವ ಉದ್ದೇಶದಿಂದ ಸ್ವಚ್ಛತೆಯತ್ತ ಒಂದು ಹೆಜ್ಜೆ ಎನ್ನುವ ಸ್ಲೋಗನ್‌ನೊಂದಿಗೆ 2014ರಲ್ಲಿಯೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದು ಅದಕ್ಕಾಗಿ ಸರ್ಕಾರವು ಸಹ ಪ್ರೋತ್ಸಾಹ ಧನ ನೀಡಿ ಸ್ವಚ್ಛತೆಯ ಕಡೆಗೆ ಆದ್ಯತೆ ನೀಡುತ್ತಿದೆ. ಹೀಗಿದ್ದರೂ ಸಹ ಹಂಚಿನಾಳ ಗ್ರಾಮದ ಜನರಿಗೆ ಶೌಚಾಲಯದ ಮಹತ್ವ ಕುರಿತು ಜಾಗೃತಿ ಮೂಡಿಸದೆ ಇರುವುದನ್ನು ನೋಡಿದರೆ ಗ್ರಾಪಂ ಕಾಳಜಿ ಎಷ್ಟರಮಟ್ಟಿಗೆ ಇದೆ ಎಂಬುದು ಕಾಣುತ್ತದೆ. ಸ್ಥಳೀಯ ಸರಕಾರಿ ಶಾಲೆಯ ಮಕ್ಕಳಿಗೆ ಕಲಿಯಲು ಶುದ್ಧ ವಾತಾವರಣ ನಿರ್ಮಿಸದೆ ಇರುವುದು ಹಾಗೂ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವಲ್ಲಿ ಶ್ರಮ ವಹಿಸದೆ ಇರುವುದು ಸ್ಥಳೀಯ ಪಂಚಾಯತಿ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. 

ಶಾಲೆಯ ವಾತಾವರಣ ಸ್ವಚ್ಛ ಸುಂದರ ಪ್ರಫುಲ್ಲವಾಗಿರಬೇಕು. ಇದು ಮಕ್ಕಳಿಗೆ ಕಲಿಯಲು ಪ್ರೇರಣಾದಾಯಿಯಾಗುತ್ತದೆ. ಅಲ್ಲದೆ ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ಸ್ವಚ್ಛತೆ ಪಾಠ ನೀಡಬೇಕು ಆದರೆ ಜಿಲ್ಲೆಯ ಹಂಚಿನಾಳ ಪ್ರಾಥಮಿಕ ಶಾಲೆಯ ಸ್ಥಿತಿ ತದ್ವಿರುದ್ಧವಾಗಿರುವುದು ನಿಜಕ್ಕೂ ಶೋಚನೀಯ. ಶಾಲೆ ಮಕ್ಕಳಿಗೆ ವಿದ್ಯಾದಾನ ಮಾಡುವ ಮಂದಿರವಾಗಿದ್ದು ಇಲ್ಲಿ ಸ್ವಚ್ಛತೆ ಕಾಪಾಡಬೇಕಾದ ಕರ್ತವ್ಯ ಹೊಣೆ ಸಾರ್ವಜನಿಕರದ್ದಾಗಿದೆ.  


ಇನ್ನಾದರೂ ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಇಲ್ಲಿನ ಅವ್ಯವಸ್ಥೆ ಸರಿಪಡಿಸಿ ಮಕ್ಕಳಿಗೆ ಶುದ್ಧ ವಾತಾವರಣ ನಿರ್ಮಿಸಿ ಶಾಲೆಗೆ ಹಸಿರಿನ ಗರಿ ಮೂಡಿಸುವಲ್ಲಿ ಶ್ರಮ ವಹಿಸಬೇಕಾಗಿದೆ. 


ಬೈಟ್ : 1) ಅರ್ಚನಾ ಇಂಗಳಗಿ. (ಶಾಲೆಯ ವಿದ್ಯಾರ್ಥಿನಿ) 

ಶಾಲಿಗೆ ಬಂದ್ರ ದುರ್ವಾಸನೆ ಹೊಡಿತೆತಿ, ಮೂಗು ಮುಚ್ಚಿಕೊಂಡ ಪಾಠ ಕೇಳಬೇಕಾಗೆತಿ ಕಾಂಪೌಂಡಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಗಲೀಜು ಇರುವುದರಿಂದ ಆ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ಬರಲಿಕ್ಕೆ ರೋಗಗಳ ಭಯ ಆಗುತ್ತಿದೆ. ಆದಷ್ಟು ಬೇಗನೆೆ ಸರಿಪಡಿಸಿ ಕಲಿಯಲಿಕ್ಕೆ ಒಳ್ಳೆಯ ವಾತಾವರಣ ನಿರ್ಮಿಸಿ ಕೊಡ್ರಿ. 


ಬೈಟ್ : ಅಭಿಷೇಕ ಹಿರೇಮಠ. ( ಶಾಲೆಯ ವಿದ್ಯಾರ್ಥಿ) 

ಈ ಶಾಲಾ ಕಾಂಪೌಂಡಗೆ ಸಾರ್ವಜನಿಕರು ಶೌಚ ಮಾಡಿ ಹೋಗುತ್ತಿರುವುದರಿಂದ ಶಾಲೆಯಲ್ಲಿ ಹೊಲಸು ವಾಸನೆ ಬರ್ತೆತಿ. ಆಟ-ಪಾಠವನ್ನು ಮೂಗು ಮುಚ್ಚಿಕೊಂಡು ಕಲಿಬೇಕಾಗೆತಿ 


ಬೈಟ್ : ಎಸ್ ಎಚ್ ಗಂಗಲ್ (ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ) 

ಕಿಟಕಿಯಿಂದ ದುರ್ವಾಸನೆ ಶಾಲೆಯ ಒಳಗೆ ಬರುತ್ತಿರುವುದರಿಂದ ಕಿಟಕಿ ತೆಗೆಯದ ಸ್ಥಿತಿ ನಿರ್ಮಾಣವಾಗಿದ್ದು ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಒಟ್ಟರೆಯಾಗಿ ಈ ಅವ್ಯವಸ್ಥೆಯಿಂದ ಶಾಲೆಯಲ್ಲಿ ಕೆಲಸ ನಿರ್ವಹಿಸಲು ಕಷ್ಟ ಆಗುತ್ತಿದೆ. 


ಸುದ್ದಿ ಓದಿ