ನೋವಿನಲ್ಲೂ ಸಾರ್ಥಕ ಮೆರೆದ ನವೀನ್ನ ಕುಟುಂಬಸ್ಥರ ಕಾರ್ಯ ಶ್ಲಾಘನೀಯ
ರಾಣೆಬೆನ್ನೂರು 22: ವೈದ್ಯಕೀಯ ಸೇವೆ ಮಾಡುವ ಹಂಬಲದಲ್ಲಿದ್ದ ಮಗನ ಆಕಸ್ಮಿಕ ಸಾವಿನಿಂದ ದುಃಖಭರಿತರಾಗಿದ್ದರೂ ಸಹ ಸಾವಿನ ನೋವಿನಲ್ಲೂ ಸಾರ್ಥಕ ಮೆರೆದ ನವೀನ್ನ ಕುಟುಂಬಸ್ಥರ ನಿರ್ಣಯ ನಿಜಕ್ಕೂ ಶ್ಲ್ಯಾಘನೀಯವಾಗಿದೆ. ಉಕ್ರೇನ್ನಲ್ಲಿ ವೈದ್ಯಕೀಯ ಅಭ್ಯಾಸ ಮಾಡಲು ತೆರಳಿದ್ದ ನವೀನ್ ರಷ್ಯಾದ ಶೆಲ್ ದಾಳಿಯಿಂದ ಸಾವನ್ನಪ್ಪಿದ್ದನು. ಇಂತಹ ಸಂದರ್ಭದಲ್ಲೂ ಸಹ ಆತ ಮೃತಪಟ್ಟು 21 ದಿನಗಳ ಬಳಿಕ ತವರಿಗೆ ಪಾರ್ಥಿವ ಶರೀರ ಬಂದಾಗ ಕುಟುಂಬಸ್ಥರು ಪೂಜೆ ಸಲ್ಲಿಸಿ ಅಂತಿಮ ವಿಧಿವಿಧಾನ ಕೈಗೊಂಡು ಸಾರ್ವಜನಿಕ ದರ್ಶನದ ನಂತರ ಪಾರ್ಥಿವ ಶರೀರವನ್ನು ದಾವಣಗೇರೆಯ ಸಿಮ್ಸ್ ದೇಹದಾನ ಸಂಸ್ಥೆ, ಎಸ್ಎಸ್ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ಸೋಮವಾರದಂದು ಹಸ್ತಾಂತರಿಸಲಾಯಿತು.
ಮೃತ ನವೀನ್ನ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದಾವಣಗೆರೆ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಯಿತು. ಆಸ್ಪತ್ರೆಯ ಡಾ. ಬಿ.ವೈ ಪ್ರಸಾದ ಹಾಗೂ ಡಾ.ವಿಜಯಕುಮಾರ ಜತ್ತಿ ಅವರು ಕುಟುಂಬಸ್ಥರಿಂದ ದೇಹದಾನ ನೀಡಿದ ಬಗ್ಗೆ ದಾಖಲೆಗಳನ್ನು ಪಡೆದು ದೇಹದಾನದ ವಿಧೇಯಕ ಪತ್ರಕ್ಕೆ ಸಹಿ ಮಾಡಿಸಿಕೊಂಡರು. ಈ ದೇಹದಾನವನ್ನು ಪಡೆದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ನವೀನ್ನ ತಂದೆತಾಯಿಗಳ ಆಸೆಯಂತೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲು ಪ್ರಮಾಣಿಕ ಕಾರ್ಯ ಮಾಡುವುದಾಗಿ ಆಸ್ಪತ್ರೆ ವೈದ್ಯರುಗಳು ಹೇಳಿದರು.
ಈ ಸಂದರ್ಭದಲ್ಲಿ ಮೃತ ನವೀನ್ ತಂದೆ ತಾಯಿ ಹಾಗೂ ಸಹೋದರ ಹರ್ಷ ಸೇರಿದಂತೆ ಸಿರಿಗೇರಿಯ ಡಾ. ಶಿವಮೂರ್ತಿ ಶ್ರೀಗಳು, ಹರಿಹರ ಪಂಚಮಸಾಲಿಯ ವಚನಾನಂದ ಶ್ರೀಗಳು, ಶಾಸಕ ಅರುಣಕುಮಾರ ಪೂಜಾರ ಪೂಜಾರ ಸೇರಿದಂತೆ ಮೃತ ನವೀನ್ ಕುಟುಂಬವರ್ಗದವರು ಇದ್ದರು.