ಕೋವಿಡ್ ತಡೆಯುವಲ್ಲಿ ಕೇಂದ್ರದ ನಿರ್ಲಕ್ಷ್ಯ ಕಾರಣ ಎಂದು ದೂರಿದ್ದ ಆರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ, ಅಕ್ಟೋಬರ್ 1: ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯತೆಯಿಂದ ವ್ಯವಹರಿಸಿದೆ ಎಂದು ನಿವೃತ್ತ ಉನ್ನತ ಸರ್ಕಾರಿ ಅಧಿಕಾರಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಆರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಫೆಬ್ರವರಿ 4 ರಂದು ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿಯನ್ನೂ ಜಾರಿಗೊಳಿಸಿದ್ದರೂ, ಮಾರ್ಚ್ 4 ರವರೆಗೆ ಅಂತರಾಷ್ಟ್ರೀಯ ಪ್ರಯಾಣಕರನ್ನು ವಿಮಾನ ನಿಲ್ದಾಣಗಳಲ್ಲಿ ಯಾವುದೇ ರೀತಿಯ ತಪಾಸಣೆ ನಡೆಸದೆ ಒಳಬಿಡಲಾಯಿತು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್, ನ್ಯಾಯಮೂರ್ತಿ ಎಲ್ .ಎನ್ . ರಾವ್ ನೇತೃತ್ವದ ನ್ಯಾಯಪೀಠದ ಮುಂದೆ ವಾದಿಸಿದರು
ಜನರು ಒಂದಡೆ ಗುಂಪು ಗೂಡಬಾರದೆಂದು ಗೃಹ ಸಚಿವಾಲಯ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದರೂ, ... ಫೆಬ್ರವರಿ 24 ರಂದು “ ನಮಸ್ತೆ ಟ್ರಂಪ್ “ಕಾರ್ಯಕ್ರಮ ನಡೆಸಿದರು. ಗುಜರಾತ್ ನ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಸಮಾರಂಭದಲ್ಲಿ ಲಕ್ಷಾಂತರ ಮಂದಿ ಹಾಜರಾಗಿದ್ದರು ಎಂದು ಪ್ರಶಾಂತ್ ಭೂಷಣ್ ನ್ಯಾಯಪೀಠದ ಗಮನಕ್ಕೆ ತಂದರು. ಸಂಪೂರ್ಣ ಲಾಕ್ ಡೌನ್ ವಿಧಿಸದಂತೆ ತಜ್ಞರು ಸಲಹೆ ನೀಡಿದರೂ ಕೂಡಾ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿತು ಎಂದು ಭೂಷಣ್ ತಿಳಿಸಿದರು.
ಲಾಕ್ ಡೌನ್ ಕಾರಣದಿಂದ ದೇಶದ ಜಿಡಿಪಿದರ ಈ ಹಿಂದೆಂದೂ ಇಲ್ಲದಷ್ಟು ಶೇ 23ರಷ್ಟಕ್ಕೆ ಕುಸಿದಿದೆ.. ಕೋಟ್ಯಾಂತರ ಮಂದಿ ಉದ್ಯೋಗ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟ ಸ್ಥಿತಿಗೆ ತಲುಪಿದ್ದಾರೆ ಎಂದು ಅವರು ವಿವರಿಸಿದರು.
ಆದರೆ, ಈ ವಿಷಯದ ಬಗ್ಗೆ ದೇಶ ಜನರಲ್ಲಿ ಚರ್ಚೆ ನಡೆಯಬೇಕೇ ಹೊರತು ನ್ಯಾಯಾಲಯದಲ್ಲಿ ಅಲ್ಲ.. ಈ ವಿಷಯದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು.
ಕೊರೊನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಸೂಕ್ತ ಸಮಯದಲ್ಲಿ ಸರಿಯಾದ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಆರ್ಜಿದಾರರು ಆರೋಪಿಸಿದ್ದಾರೆ. ಈ ಕುರಿತು ತನಿಖಾ ಆಯೋಗ ಕಾಯ್ದೆ 1952 ರಡಿ ಆಯೋಗವೊಂದನ್ನು ರಚಿಸಿ ಸ್ವತಂತ್ರ ತನಿಖೆಗೆ ಆದೇಶಿಸಬೇಕೆಂದು ಆರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.