ಸಡಗರದ ಬಸವೇಶ್ವರ ಜಾತ್ರಾ ರಥೋತ್ಸವ
ಬೈಲಹೊಂಗಲ: ತಾಲೂಕಿನ ನಯಾನಗರ ಗ್ರಾಮದ ಇತಿಹಾಸ ಪ್ರಸಿದ್ಧ ಬಸವೇಶ್ವರ ಜಾತ್ರಾ ರಥೋತ್ಸವ ಸಡಗರ ಸಂಭ್ರಮದಿಂದ, ಭಕ್ತರ ಹರ ಹರ ಮಹಾದೇವ ಎಂಬ ಹರ್ಷೋದ್ಧಾರದ ಮೂಲಕ ವಿಜ್ರಂಭೃಣೆಯಿಂದ ಜರುಗಿತು.
ನಯಾನಗರದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ಹಾಗೂ ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥೋತ್ಸವಕ್ಕೆ ಹೂವು, ಹಣ್ಣು, ನೈವೇದ್ಯ, ಖಾರಿಕ ಸಮರ್ಪಿಸಿ ಪುಳಕಿತರಾದರು ಹಾದಿಯುದ್ದಕ್ಕೂ ಭಕ್ತರು ಹಸಿರು ತಳಿರು ತೋರಣ, ರಂಗೋಲಿಗಳಿಂದ ಬೀದಿ-ಬೀದಿಗಳನ್ನು ಶೃಂಗರಿಸಿದ್ದರು.
ಮಾಜಿ ಹಾಲಿ ಸೈನಿಕರು ವಿಶೇಷ ವಸ್ತ್ರಾಲಂಕಾರದ ಮೂಲಕ ಗಮನ ಸೆಳೆದರು. ಸಾರ್ವಜನಿಕರು ಜಾನಪದ ಶೈಲಿಯ ತರ-ತರನಾದ ವೇಷ-ಭೋಷಣಗಳಿಂದ ಕಂಗೊಳಿಸಿ ರಥೋತ್ಸವಕ್ಕೆ ಮೆರಗು ತಂದು ಕೊಟ್ಟರು. ರಥವು ಪ್ರಮುಖ ಬೀದಿಯಲ್ಲಿ ಸಂಚರಿಸಿ ಪುನಃ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿತು.
ಜಾತ್ರಾ ಕಮಿಟಿ ಮುಖಂಡ ದೇಮನಗೌಡ ಶೀಲವಂತರ, ಶ್ರೀರಂಗರಾವ ನಲವಡೆ, ನಾರಾಯಣ ಶಿರೋಮನಿ, ಮಹಾಬಳೇಶ್ವರ ಮರೆಕ್ಕನವರ, ಎನ್.ಎ.ನಲವಡೆ, ರಾವಸಾಹೇಬ ಸೂರ್ಯವಂಶಿ, ಶಂಕರರಾವ ನಲವಡೆ ಅಪಾರ ಸಂಖ್ಯೆಯ ಭಕ್ತರು ಯಶಸ್ವಿಗೊಳಿಸಿದರು.
ನಿಮಿತ್ಯ ಗ್ರಾಮದ ಮುಖಂಡರು ಹಾಗೂ ಯುವಕರು ಹಲವಾರು ಸ್ಪರ್ದೆಗಳನ್ನು ಏರ್ಪಡಿಸಿದ್ದರು.
ಸ್ಲೋ ಬೈಕ ರೇಸ್, ರಂಗೋಲಿ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಿ ಅರ್ಹತೆ ಪಡೆದವರಿಗೆ ಬಹುಮಾನಗಳನ್ನು ವಿತರಿಸಿದರು,
ಶಿವರಾತ್ರಿ ನಿಮಿತ್ಯ ಶರಣರ ಜೀವನದರ್ಶನ ವಿಷಯ ಕುರಿತು ಉಪನ್ಯಾಸ ಹಾಗೂ ಪ್ರವಚನ ಕಾರ್ಯಕ್ರಮ ಜರುಗಿತು. ಸುಖದೇವಾನಂದ ಪುಣ್ಯಾಶ್ರಮದ ಪ.ಪೂ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು.
ಚಿಕ್ಕ ಮುನವಳ್ಳಿಯ ಶೊ.ಬ್ರ ಶಿವಪುತ್ರ ಶ್ರೀಗಳು ಶರಣರ ಜೀವನ ಕುರಿತು ಪ್ರವಚನ ನೀಡಿದರು. ಮುಂಜಾನೆ ನಡೆದ ಮಹಾರುದ್ರಾಭಿಷೇಕ ಕಾರ್ಯಕ್ರಮದ ಶ್ರೀರಕ್ಷೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಜಿ.ಪಂ ಸದಸ್ಯ ಅನೀಲ ಮೇಕಲಮರ್ಡಿ ಮುಂತಾದವರು ಉಪಸ್ಥಿತರಿದ್ದು ಬಸವೇಶ್ವರನ ಕೃಪೆಗೆ ಪಾತ್ರರಾದರು.
ಜಾತ್ರಾ ನಿಮಿತ್ಯ ಕಲಾ ತಪಸ್ವಿ ಮೇಲೋಡೀಸ್ ಬೆಳಗಾವಿ ತಂಡದಿಂದ ರಸಮಂಜರಿ ಕಾರ್ಯಕ್ರಮ ಜನಮನ ರಂಜಿಸಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಬೈಲಹೊಂಗಲ, ಆನಿಗೋಳ, ಅಮಟೂರ, ಬೇವಿನಕೊಪ್ಪ, ದೇವಲಾಪೂರ, ವಕ್ಕುಂದ, ಕೆಂಗಾನೂರ, ಅರವಳ್ಳಿ ಜಾಲಿಕೊಪ್ಪ ಗರ್ಜೂರ ಸಂಗೊಳ್ಳಿ, ಬೆಳವಡಿ, ಲಿಂಗದಳ್ಳಿ, ಚಿವಟಗುಂಡಿ, ಬೈಲವಾಡ ಸೇರಿದಂತೆ ಇನ್ನೂ ಮುಂತಾದ ಗ್ರಾಮಗಳ ಜನರು ಉಪಸ್ಥಿತರಿದ್ದರು.
ಶಿಕ್ಷಕ ಮಹಾಂತೇಶ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ವೆಂಕಟೇಶ ಬಾಗಲ ನಿರೂಪಿಸಿದರು. ಶಿಕ್ಷಕ ಸಂತೋಷ ಸಂಗೊಳ್ಳಿ ವಂದಿಸಿದರು.