ರಾಣೆಬೆನ್ನೂರ

ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮನಗೆದ್ದ ಎನ್‌ಎಸ್‌ಎಸ್ ಶಿಬಿರ

ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮನಗೆದ್ದ ಎನ್‌ಎಸ್‌ಎಸ್ ಶಿಬಿರ

ರಾಣೇಬೆನ್ನೂರು 10:  ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ತಾಲ್ಲೂಕಿನ ಕಮದೋಡ ಗ್ರಾಮದಲ್ಲಿ ಆಯೋಜಿಸಿದ ವಾರ್ಷಿಕ ವಿಶೇಷ ಶಿಬಿರವು ಗ್ರಾಮಸ್ಥರ ಮನಗೆದ್ದಿದೆ. ಎನ್‌ಎಸ್‌ಎಸ್ ಅಧಿಕಾರಿಗಳಾ ಡಾ. ಅರುಣಕುಮಾರ ಚಂದನ್ ಹಾಗೂ ಡಾ. ಸಿದ್ದಲಿಂಗಮ್ಮ ಬಿ.ಜಿ. ಇವರ ನೇತೃತ್ವದ ಶಿಬಿರಾರ್ಥಿಗಳ ತಂಡವು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 

ಕಮದೋಡ ಸರ್ಕಾರಿ ಶಾಲೆಯ ಆವರಣದಲ್ಲಿ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಬೋರ್‌ವೆಲ್‌ನಿಂದ ನೀರಿನ ಟ್ಯಾಂಕ್, ಶಾಲೆಯ ಅಡುಗೆಮನೆ, ಕೈತೊಳೆದುಕೊಳ್ಳುವ ಪ್ರದೇಶ ಹೀಗೆ ಅವಶ್ಯಕ ಸ್ಥಳಗಳಲ್ಲಿ ಶ್ರಮದಾನದ ಮೂಲಕ ಭೂಮಿ ಅಗೆದು ಮುಕ್ಕಾಲು ಕಿ.ಮೀ. ಉದ್ದದ ಪೈಪ್‌ಲೈನ್ ಮಾಡಿದ್ದಾರೆ ಅಂದಾಜು ಹತ್ತು ಫೂಟ್ ಉದ್ದದ ಕಂಪೌಂಡ್ ಗೋಡೆ ನಿರ್ಮಿಸಿದ್ದಾರೆ, ಕಂಪೌಂಡ್‌ಗೋಡೆಗೆ ಗೇಟ್ ಅಳವಡಿಸಿದ್ದಾರೆ. ಅಲ್ಲದೇ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಕೆಳಗಡೆ ಬೆಳೆದಿದ್ದ ನೂರಾರು ಮುಳ್ಳಿನ ಕಂಟಿಗಳನ್ನು ಕಡೆದು ಸ್ವಚ್ಛಗೊಳಿಸಿದ್ದಾರೆ. ಹಾಗೆಯೇ ಗ್ರಾಮದ ರಸ್ತೆಗಳೆಲ್ಲಾವನ್ನು ಸ್ವಚ್ಛಗೊಳಿಸಿ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸಿದ್ದಾರೆ.  

ಆರೋಗ್ಯ ಇಲಾಖೆಯ ಸಹಕಾರದಲ್ಲಿ ಶಾಲಾಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ರಾಣೇಬೆನ್ನೂರು ಜೇಸಿಐ ಸಹಕಾರದಲ್ಲಿ ರಕ್ತದಾನದ ಮಹತ್ವವನ್ನು ಮನೆಮನೆಗೆ ತಲುಪಿಸಿ, ರಕ್ತದಾನ ಶಿಬಿರವನ್ನೂ ಆಯೋಜಿಸಿ ಅಪತ್ಕಾಲದಲ್ಲಿ ರಕ್ತಹೀನತೆಯಿಂದ ಬಳಲುವ ಅನೇಕರ ಪ್ರಾಣರಕ್ಷಣೆಗೆ ಸಹಾಯ ಮಾಡಿದ್ದಾರೆ 

ಇಂದು ನಡೆದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮುಖ್ಯಅತಿಥಿ ಆಗಿ ಆಗಮಿಸಿದ್ದ ಬಸಣ್ಣ ಕಡ್ಲೆಪ್ಪನವರ, ಎನ್‌ಎಸ್‌ಎಸ್ ಶಿಬಿರವು ಶಾಲಾಭಿವೃದ್ಧಿಗೆ ಅಭೂತಪೂರ್ವವಾಗಿ ಶ್ರಮಿಸಿದ್ದಾರೆ. ಯಾವುದೇ ಗ್ರಾಮವು ಅಭಿವೃದ್ಧಿಗೊಳ್ಳಬೇಕಾದರೆ ಆ ಗ್ರಾಮದ ಶಾಲೆಯು ಮೂಲಭುತ ಸೌಲಬ್ಯಗಳು ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿದ್ದಲ್ಲಿ, ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು. ಮುಖ್ಯಗುರು ಮಾತೆ ಹಾಗೂ ಶಿಕ್ಷಕರು ಶಿಬಿರಾರ್ಥಿಗಳ ಕಾರ್ಯದ ಗುಣಗಾನ ಮಾಡಿದರು. ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಎಲ್‌.ವಿ.ಸಂಗಳದ, ಕಮದೋಡನ್ನು ನಮ್ಮ ಕಾಲೇಜಿನ ಎನ್‌ಎಸ್‌ಎಸ್ ವತಿಯಿಂದ ದತ್ತು ಗ್ರಾಮವಾಗಿ ತೆಗೆದುಕೊಂಡಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸಹಕಾರದ ಮೂಲಕ ಗ್ರಾಮದ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದೇವೆ ಎಂದರು. ಗ್ರೇಡ್‌-2 ತಹಶೀಲ್ದಾರರಾದ ಸಿದ್ಧನಗೌಡ ಅವರು ಭಾಗವಹಿಸಿದ್ದರು. ಡಾ. ಸಿದ್ದಲಿಂಗಮ್ಮ ಬಿ.ಜಿ. ವರದಿ ವಾಚನ ಮಾಡಿದರು. 

ಡಾ.ಅರುಣಕುಮಾರ ಚಂದನ್ ಶಿಬಿರದ ಗುರಿ ಉದ್ದೇಶಗಳ ಈಡೇರಿಕೆಗೆ ಕಾರಣೀಭೂತರಾದ ಗ್ರಾಮಪಂಚಾಯತ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರೂ ಹಾಗೂ ಸರ್ವಸದಸ್ಯರೂ ಹಾಗೂ ಗ್ರಾಮದ ಗಣ್ಯರನ್ನು ವಂದಿಸಿದರು. ಗೀತಾ ಕೋಟೆಣ್ಣನವರ, ಕುಮಾರ ಎ.ಬಿ. ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ