ರಂಗೀನಾಟದ ಹೋಳಿ ಹಬ್ಬ ಅದ್ದೂರಿಯಾಗಿ ಆಚರಣೆ
ಬೈಲಹೊಂಗಲ 26: ಹೋಳಿ ಹಬ್ಬವನ್ನು ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಮಹಿಳೆಯರು, ಮಕ್ಕಳು, ಯುವಕ-ಯುವತಿಯರು ಪರಸ್ಪರ ಬಣ್ಣ ಹಚ್ಚಿ, ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸುವ ಮೂಲಕ ಅದ್ದೂರಿಯಾಗಿ ಹೋಳಿ ಹಬ್ಬ ಆಚರಿಸಿದರು.
ಬಣ್ಣ ಮತ್ತು ಬಣ್ಣದಾಟದ ಸಾಮಗ್ರಿಗಳನ್ನು ಎರಡು ದಿನ ಮುಂಚಿತವಾಗಿಯೇ ತಂದಿಟ್ಟುಕೊಂಡಿದ್ದ ಚಿಣ್ಣರು, ಹಾಸಿಗೆಯಿಂದ ಏಳುತ್ತಲೇ ಬೀದಿಗಿಳಿದರು. ಬಣ್ಣ ತುಂಬಿದ ಬಾಟಲ್ ಪಿಚಗಾರಿಗಳನ್ನು ಕೈಯಲ್ಲಿ ಹಿಡಿದು ಗೆಳೆಯರೊಂದಿಗೆ ಪರಸ್ಪರ ಬಣ್ಣ ಎರಚಾಡಿ ಹಬ್ಬಕ್ಕೆ ಚಾಲನೆ ನೀಡಿದರು.
ಉತ್ಸಾಹದ ಹೋಳಿ: ಬಿಸಿಲೇರಿದಂತೆ ಯುವಕ-ಯುವತಿಯರು, ಗೃಹಿಣಿಯರು ಉತ್ಸಾಹದಿಂದ ಪಾಲ್ಗೊಂಡು ಹೋಳಿ ಹಬ್ಬ ಆಚರಿಸಿದರು.
ಕಣ್ಣೆಳೆದ ನೃತ್ಯ: ಹಲಗೆ ಬಾರಿಸುತ್ತ ಬೈಕ್ ಮೇಲೆ ಯುವಕರು ಓಡಾಡಿದರೆ ಇನ್ನೂ ಕೆಲವರು ಹೋಳಿ ಹುಣ್ಣಿಮೆ ಪದಗಳನ್ನು ಹಾಡುತ್ತ ತಿರುಗಾಡಿದರು.
ಮಹಿಳೆಯರು ಬಣ್ಣದ ಆಟವಾಡಿ ಹಬ್ಬಕ್ಕೆ ವಿಶೇಷ ಮೆರಗು ತಂದರು. ಬಗೆಬಗೆಯ ಸೋಗು (ವೇಷ) ಧರಿಸಿಕೊಂಡು ಮನೆಮನೆಗೆ ಹೋಗಿ ಹಣ ಕೇಳುವುದು, ಹಣ ಕೊಡುವವರೆಗೂ ಮನೆಯ ಎದುರು ಬಾಯಿ ಬಡಿದು-ಕೊಳ್ಳುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿ ಕಂಡು ಬಂದಿತು.
ಗ್ರಾಮೀಣ ಭಾಗದಲ್ಲಿ ಹೋಳಿ ಹಬ್ಬವನ್ನು ಜನರು ಅರ್ಥಪೂರ್ಣವಾಗಿ ಆಚರಿಸಿದ್ದು ಕಂಡು ಬಂದಿತು. ಊರ ಹಿರಿಯರು ಪಾಲ್ಗೊಂಡು ಹೋಳಿ ಪದಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಇನ್ನು ಕೆಲವೆಡೆ ಮುಖಂಡರು ಹಬ್ಬದಲ್ಲಿ ಪಾಲ್ಗೊಂಡು ಯುವಜನತೆಯನ್ನು ಆಕರ್ಷಿಸಲು ಯತ್ನಿಸಿದರು. ಕಾಮ ದಹನ ನಾನಾ ಬಡಾವಣೆಗಳಲ್ಲಿ ಸಡಗರದಿಂದ ನೆರವೇರಿತು.
ಡಿಜೆ ಸೌಂಡ್ಗೆ ಸಖತ್ ಡ್ಯಾನ್ಸ್ : ಪಟ್ಟಣದ ಶೂರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಹಾಂತೇಶ ತುರಮರಿ ಅಭಿಮಾನಿ ಬಳಗ, ಕಾರ್ಯನಿರತ ಪತ್ರಕರ್ತರ ಸಂಘ, ಆರ್.ಕೆ.ಸೌಂಡ್ ಹಾಗೂ ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗದ ಆಶ್ರಯದಲ್ಲಿ ಹೋಳಿ ಉತ್ಸವ ಅದ್ದೂರಿಯಾಗಿ ನಡೆಯಿತು. ಇದೇ ವೇಳೆ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಸಿಪಿಐ ಎಂ.ಎಸ್.ಹೂಗಾರ, ಮುಖಂಡ ವಿರುಪಾಕ್ಷ ವಾಲಿ ಚಾಲನೆ ನೀಡಿದರು. ಯುವಕರು ಸಖತ್ ಡ್ಯಾನ್ಸ್ ಮಾಡಿ ಗಮನ ಸೆಳೆದರು.
ಅರ್ಬನ್ ಬ್ಯಾಂಕ್ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಡೆದ ಹೋಳಿ ಉತ್ಸವದಲ್ಲಿ ನೂರಾರು ಯುವಕರು ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸಿದರು. ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ತಾಲೂಕಾಧ್ಯಕ್ಷ ರಾಜು ಬೋಳಣ್ಣವರ ಚಾಲನೆ ನೀಡಿದರು. ಪಟ್ಟಣದ ಅಂಬೇಡ್ಕರ ನಗರದಲ್ಲಿ ನೂರಾರು ಯುವಕರು ಎರಡು ಡಿಜೆ ಸೌಂಡ್ ಜೊತೆ ವಿಶೇಷವಾಗಿ ಹೋಳಿ ಹಬ್ಬ ಆಚರಿಸಿದರು. ಇದೇ ವೇಳೆ ಬೃಹತ್ ಎರಡು ಚೌಡಿ ಕಾಮ ದಹನ ಸಡಗರದಿಂದ ನಡೆಯಿತು.