ಚಿಕ್ಕೋಡಿ

ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ ಚಿಕ್ಕೋಡಿ ಡಯಟ್ ಕಚೇರಿ

ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ ಚಿಕ್ಕೋಡಿ ಡಯಟ್ ಕಚೇರಿ

ಚಿಕ್ಕೋಡಿ 15: ಹಸಿರೇ ಉಸಿರು ಎನ್ನುವ ನಾಣ್ಣುಡಿಯಂತೆ ಪ್ರಕೃತಿಯ ಜೊತೆ ಸ್ನೇಹ ಬೆಳೆಸಿ, ಹಸಿರನ್ನು ಉಳಿಸಿ ಬೆಳೆಸುವುದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ ಚಿಕ್ಕೋಡಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(ಡಯಟ್) ಸಿಬ್ಬಂದಿಗಳು. 

ನಿಜ ಅರ್ಥದಲ್ಲಿ ಸರಕಾರಿ ಮಾದರಿ ಕಚೇರಿ ಎನ್ನುವಂತೆ ನಡೆಯುತ್ತಿದೆ ಇಲ್ಲಿಯ ಶಿಕ್ಷಕ ಸಿಬ್ಬಂದಿಗಳ ಕಾರ್ಯಚಟುವಟಿಕೆ. ಹಳೆ ಡಿಡಿಪಿಐ ಕಚೇರಿಯಲ್ಲಿ ಈಗ ಡಯಟ್ ಕಚೇರಿ ಕಾರ್ಯಾರಂಭ ಮಾಡಿದೆ. ಕಚೇರಿ ಆವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಕಚೇರಿ ಮುಂಭಾಗಕ್ಕೆ ಎಂಟ್ರೀ ಕೊಟ್ಟರೇ ಸಾಕು ಮಲೆನಾಡಿನ ತೋಟದಂತೆ ಅನುಭವ ಆಗುತ್ತದೆ. 

ಡಯಟ ಪ್ರಾಚಾರ್ಯ ಮೋಹನ ಜಿರಗಿಹಾಳ ಅವರು ಸಿಬ್ಬಂದಿ ಜೊತೆಗೂಡಿ ಕಚೇರಿ ಬಿಡುವಿನ ವೇಳೆಯಲ್ಲಿ ಪ್ರತಿದಿನ ಅರ್ಧ ಅಥವಾ ಒಂದು ಗಂಟೆ ಸಮಯವನ್ನು ಕಚೇರಿ ಆವರಣದ ಸಸಿಗಳ ಆರೈಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದರಿಂದ ಡಯಟ ಕಚೇರಿಯ ಆವರಣ ವಿವಿಧ ಬಗೆಯ ಹೂವು -ಓಷಧಿ ಸಸ್ಯಗಳು ಹಸಿರು ಮೈದುಂಬಿ ಕಂಗೊಳಿಸುತ್ತಿದೆ. 

ಅನ್ನ ಬೆಳೆಯುವ ರೈತನ ಶ್ರಮ ಅರಿತಿರುವ ಶಿಕ್ಷಕರು ಸ್ವಇಚ್ಛೆಯಿಂದ ಕಚೇರಿ ಆವರಣದ ಸಸಿಗಳ ಬೆಳೆಸುವಲ್ಲಿ ಸೈ ಅನಿಸಿಕೊಂಡಿದ್ದಾರೆ. ಕಚೇರಿ ಸುತ್ತಮುತ್ತ ಸ್ವಚ್ಛ ಆವರಣದಲ್ಲಿ ಘಮಘಮಿಸುವ ವಿವಿಧ ಬಗೆಯ ಹೂವುಗಳು ನೋಡುವುದೇ ಒಂದು ಆನಂದ. ಕೇವಲ ಸಸಿಗಳನ್ನು ಹಚ್ಚದೇ ಆಯುರ್ವೇಧ ಓಷಧಿಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಅಮೃತಬಳ್ಳಿ, ಹಾಲಿ ಬಳ್ಳಿ ನೆಟ್ಟಿದ್ದಾರೆ. 

ಸರಕಾರಿ ಕಚೇರಿ ಎಂದರೇ ಹಸಿರಿಕರಣವಾಗುವುದು ಅತೀ ವಿರಳ, ಆದರೆ ಡಯಟ್ ಕಚೇರಿ ಎಲ್ಲ ಕಚೇರಿಗಿಂತ ವಿಭಿನ್ನವಾಗಿರಲು ಸಿಬ್ಬಂದಿಗಳು ನೆರ್ಲಿ, ತೆಂಗು, ಚಿಕ್ಕು ಹಣ್ಣಿನ ಗಿಡ, ಮಾವು, ಕ್ರೋಟಾನ್, ಬದಾಮಾ ಗಿಡ, ಕದಂ, ಹಲಸಿನ ಗಿಡ ಹಚ್ಚಿ ಸೌಂದರ್ಯವನ್ನು ಸೃಷ್ಟಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆ ಆಗುವುದರಿಂದ ಹಚ್ಚಿದ ಸಸಿಗಳು ಹಚ್ಚ ಹಸಿರಿನಿಂದ ಕಂಗೊಳ್ಳಿಸುತ್ತಿರುವುದು ಕಚೇರಿಗೆ ಮೆರಗು ಬಂದಿದೆ ಎನ್ನುತ್ತಾರೆ ಡಯಟ್ ಸಿಬ್ಬಂದಿಗಳು. 

ಹಸಿರೇ ಉಸಿರು ಎನ್ನುವುದನ್ನು ನಮ್ಮ ಜೀವನದಲ್ಲಿ ರೂಡಿ ಮಾಡಿಕೊಂಡಾಗ ಮಾತ್ರ ಪರಿಸರ ಉಳಿಯಲು ಸಾಧ್ಯವಾಗುತ್ತದೆ. ಈ ಹಿನ್ನಲ್ಲೆಯಲ್ಲಿ ಡಯಟ್ ಕಚೇರಿಯಲ್ಲಿ ಎಲ್ಲ ಬಗೆಯ ಸಸಿಗಳು ಮತ್ತು ಓಷಧಿ ಸಸಿಗಳನ್ನು ಹಚ್ಚಲಾಗಿದೆ. ಕೆಲಸದ ಬಿಡುವಿನ ವೇಳೆಯಲ್ಲಿ ಸಸಿಗಳ ಆರೈಕೆ ಮಾಡಲಾಗುತ್ತದೆ. ಇದರಿಂದ ಮನಸ್ಸಿಗೆ ಸಮಾಧಾನವಾಗುತ್ತದೆ ಎನ್ನುತ್ತಾರೆ ಡಯಟ್ ಪ್ರಾಚಾರ್ಯ  ಮೋಹನ ಜಿರಗಿಹಾಳ. 


ಸುದ್ದಿ ಓದಿ