ಮುಖ್ಯಮಂತ್ರಿಗಳು ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದಾರೆ: ಬಿ.ಸಿ.ಪಾಟೀಲ್
ಹೊಸಪೇಟೆ, ನವೆಂಬರ್ 19; ಮುಖ್ಯಮಂತ್ರಿಗಳನ್ನಾಗಲೀ ಪಕ್ಷದ ವರಿಷ್ಠರನ್ನಾಗಲಿ ಶಾಸಕರು ಭೇಟಿ ಮಾಡಿದ ತಕ್ಷಣ ಅವರೆಲ್ಲ
ಮಂತ್ರಿಗಿರಿಗಾಗಿಯೇ ಹೋಗಿದ್ದಾರೆ ಎನ್ನುವ ಕಲ್ಪನೆ ತಪ್ಪು. ಶುಭಾಶಯ ಕೋರಲೋ ಅಥವಾ ಕ್ಷೇತ್ರದ ಕೆಲಸಕ್ಕಾಗಿಯೋ
ಭೇಟಿ ಮಾಡುವುದು ಸಹಜ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹೊಸಪೇಟೆಯಲ್ಲಿನ 67 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಯುವಜನ ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ
ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್ , ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಹದಿನೇಳು ಜನರನ್ನು ಬಹಳ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಅದರಂತೆ ಎಲ್ಲಾ ಶಾಸಕರು ಸಚಿವರನ್ನೂ ಸಹ ಗೌರವದಿಂದಲೇ ಕಾಣುತ್ತಿದ್ದಾರೆ. ಯಾರಿಗೆ ಏನು ಸ್ಥಾನಮಾನ ಗೌರವ ಕೊಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಚೆನ್ನಾಗಿ ಗೊತ್ತಿದೆ. ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ. ಎಲ್ಲರೂ ಸಹೋದರರಂತಿದ್ದೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.