ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ
ಲೋಕದರ್ಶನ ವರದಿ
ಬೆಳಗಾವಿ 07: ತಾಲೂಕಿನ ಬಡೆಕೊಳ್ಳಮಠ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ತಮ್ಮ ಕಚೇರಿಯಿಂದ ಸಲ್ಲಿಸಲಾದ ಪ್ರಸ್ತಾವನೆಯ ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಮಳೆ ಕಡಿಮೆಯಾದ ತಕ್ಷಣ ಶಾಶ್ವತ ಕಾಮಗಾರಿ ಆರಂಭವಾಗಲಿದೆ ಎಂದು ಬೆಳಗಾವಿ ನಗರ ಪೊಲೀಸ ಆಯುಕ್ತ ಭೂಷಣ್ ಬೋರಸೆ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆಯುಕ್ತರು, ಮಳೆಗಾಲ ಮುಗಿಯುವ ವರೆಗೆ, ಅಪಘಾತಗಳ ಸಂಭವವನ್ನು ಕಡಿಮೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ನೀರಿನಿಂದ ತುಂಬಿದ ಡ್ರಮ್ಗಳು, ಟ್ರಾಫಿಕ್ ಕೋನ್ಗಳು, ಪ್ರತಿಫಲಿತ ಮನುಷ್ಯಾಕೃತಿಗಳು ಹಾಗೂ ಎಚ್ಚರಿಕೆ ಸೂಚನಾ ಫಲಕಗಳನ್ನು ಅಪಘಾತ ಪೀಡಿತ ಪ್ರದೇಶದಾದ್ಯಂತ ಅಳವಡಿಸಲಾಗುತ್ತದೆ.
ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಓಊಂಋ) ಅಧಿಕಾರಿಗಳೊಂದಿಗೆ ನಿಕಟ ಸಮನ್ವಯ ಸಾಧಿಸಿ ಈ ಸುರಕ್ಷತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ರಮಗಳಿಂದ ಭವಿಷ್ಯದಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ನೀರೀಕ್ಷೆಯಿದೆ ಎಂದು ಪೋಲಿಸ್ ಆಯುಕ್ತ ಭೂಷಣ್ ಬೋರಸೆ ಅವರು ತಿಳಿಸಿದ್ದಾರೆ.