ಉಪನ್ಯಾಸಕರು, ಪೋಷಕರು, ವಿದ್ಯಾರ್ಥಿಗಳ ಸಾಂಘಿಕ ಪ್ರಯತ್ನ ಅಗತ್ಯ: ಎಂ.ಎಸ್.ದಿವಾಕರ್
ವಿಜಯನಗರ ಜಿಲ್ಲೆ ಪಿಯುಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ
ಹೊಸಪೇಟೆ 23: ವಿಜಯನಗರ ಜಿಲ್ಲೆಯ ಈ ವರ್ಷದ ಪಿಯುಸಿ ಪರೀಕ್ಷೆ ಫಲಿತಾಂಶ ಸುಧಾರಿಸಲು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಸಂಘಟಿತ ಪ್ರಯತ್ನ ಮಾಡಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಹೇಳಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಪ್ರಾಂಶುಪಾಲರೊಂದಿಗೆ ಅಕ್ಟೋಬರ್ 23 ರಂದು ದ್ವಿತೀಯ ಪಿಯುಸಿ ಫಲಿತಾಂಶದ ಸುಧಾರಣೆಗೆ ಕೈಗೊಂಡ ಕ್ರಮಗಳ ಕುರಿತಂತೆ ನಡೆಸಲಾದ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ವಿವಿಧ ವಿಷಯಗಳ ಉಪನ್ಯಾಸಕರು ಅನುಭವಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಿದ್ದಾರೆ, ಉಪನ್ಯಾಸಕರು ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಬೇಕು. ವಿದ್ಯಾರ್ಥಿಗಳು ಅರ್ಥೈಸಿಕೊಳ್ಳುವಿಕೆ ಯಲ್ಲಿ ಹಿಂದುಳಿದಿದ್ದಲ್ಲಿ ಈ ವಿದ್ಯಾರ್ಥಿಗಳಿಗಾಗಿ ಪರಿಹಾರ ಬೋಧನಾ ತರಗತಿಗಳನ್ನು ನಡೆಸಿ, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಲ್ಲಿ ಧನಾತ್ಮಕ ಮನೋಭಾವನೆ ಮೂಡಿಸಬೇಕು. ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ನಿಟ್ಟಿನಲ್ಲಿ ವಿಶೇಷ ಬೋಧನೆ ಜೊತೆಗೆ ವಿದ್ಯಾರ್ಥಿಗಳಿಗೆ ಅರ್ಥೈಸುವ ನಿಟ್ಟಿನಲ್ಲಿ ಬೋಧನೆ ಮಾಡಬೇಕು ಎಂದರು.
ಪದವಿಪೂರ್ವ ಕಾಲೇಜುಗಳ ಎಲ್ಲಾ ಪ್ರಾಚಾರ್ಯರು ಆಗಮಿಸಿದ್ದು, ಪದವಿ ಪೂರ್ವ ಕಾಲೇಜುಗಳ ಮೂಲಭೂತ ಸೌಕರ್ಯಗಳ ಕುರಿತು ಚರ್ಚಿಸಿದರಲ್ಲದೆ ಎಲ್ಲರೂ ಶ್ರದ್ದೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಸಲಹೆ ನೀಡಿದರು.
ಉಪನ್ಯಾಸಕರು ತಾವೇ ಒಂದು ಕ್ರಿಯಾಯೋಜನೆ ರೂಪಿಸಿಕೊಂಡು ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಿಸಲು ಪ್ರಯತ್ನಿಸಬೇಕು. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ಸಾಮೂಹಿಕ ಜವಾಬ್ದಾರಿ ಆಗಿದ್ದು ಫಲಿತಾಂಶ ಕಡಿಮೆ ಆಗಲು ಉಪನ್ಯಾಸಕರು ಮಾತ್ರ ಕಾರಣವಲ್ಲ, ಇದಕ್ಕೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಅವುಗಳನ್ನು ಉಪನ್ಯಾಸಕರು ಗುರುತಿಸಿ ಪರಿಹಾರ ಕಂಡುಕೊಂಡಾಗ ಫಲಿತಾಂಶ ಸುಧಾರಿಸಲು ಸಾಧ್ಯ ಎಂದರು.
ವಿಜಯನಗರ ಜಿಲ್ಲೆಯಲ್ಲಿರುವ ತಾಲೂಕುವಾರು ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿ ಸಹಿತ ಒಟ್ಟು 101 ಪದವಿ ಪೂರ್ವ ಕಾಲೇಜುಗಳಿದ್ದು, ಎಲ್ಲಾ ಕಾಲೇಜಿನ ಪ್ರಾಚಾರ್ಯರು ನಿಯಮಾನುಸಾರ ಕೆಲಸ ಮಾಡಿ, ನಿಮ್ಮ ಜೊತೆ ನಾನೀರುತ್ತೇನೆ ಎಂದರು.
ಸಭೆಯಲ್ಲಿ ಉಪನಿರ್ದೇಶಕರಾದ ಟಿ ಪಾಲಾಕ್ಷ ಹಾಗೂ ಜಿಲ್ಲೆಯ ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್ ಮತ್ತು ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಎಲ್ಲಾ ಪ್ರಾಚಾರ್ಯರು ಉಪಸ್ಥಿತರಿದ್ದರು.