ರಾಷ್ಟ್ರೀಯ

ಅಂಗನವಾಡಿ ಕಾರ್ಯಕರ್ತೆಯರ ಬೆಂಬಲಕ್ಕೆ ದೆಹಲಿ ಸರ್ಕಾರ ಬದ್ಧ: ಕಪಿಲ್ ಮಿಶ್ರಾ

ಅಂಗನವಾಡಿ ಕಾರ್ಯಕರ್ತೆಯರ ಬೆಂಬಲಕ್ಕೆ ದೆಹಲಿ ಸರ್ಕಾರ ಬದ್ಧ: ಕಪಿಲ್ ಮಿಶ್ರಾ

ನವದೆಹಲಿ, ನ. 25: ಅಂಗನವಾಡಿ ಕಾರ್ಯಕರ್ತೆಯರಿಗೆ ಬೆಂಬಲ ನೀಡಲು ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸಲು ದೆಹಲಿ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಕಪಿಲ್ ಮಿಶ್ರಾ ಬುಧವಾರ ಹೇಳಿದರು. ಈಶಾನ್ಯ ದೆಹಲಿಯ ಕರಾವಲ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ, ಅಂಗನವಾಡಿ ಕಿಟ್‌ಗಳನ್ನು ವಿತರಿಸಿದರು.

ಒಂಬತ್ತನೇ ಪೋಷಣ್ ಮಾಸದ ಅಂಗವಾಗಿ ‘ಹಮಾರಿ ಅಂಗನವಾಡಿ – ಹಮಾರಿ ಜಿಮ್ಮೇದಾರಿ’ ಅಭಿಯಾನದಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಥಳೀಯ ಶಾಸಕರ ಶಿಬಿರ ಕಚೇರಿಯಲ್ಲಿ ‘ಆಂಗನ್ ಕಾ ಮಿಲನ್’ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಿಶ್ರಾ, ಮಕ್ಕಳ ಪೌಷ್ಟಿಕತೆ, ಪ್ರಾರಂಭಿಕ ಶಿಕ್ಷಣ, ತಾಯಂದಿರ ಆರೋಗ್ಯ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು. ಅವರ ದಿನನಿತ್ಯದ ಸೇವೆ ಮಕ್ಕಳ ಸಮಗ್ರ ಬೆಳವಣಿಗೆಗೆ ಅಡಿಪಾಯ ಹಾಕುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನೇತೃತ್ವದ ದೆಹಲಿ ಸರ್ಕಾರವು ಕಾರ್ಮಿಕರು ಮತ್ತು ನೌಕರರ ವೇತನ, ಉದ್ಯೋಗ ಹಾಗೂ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಮಿಶ್ರಾ ತಿಳಿಸಿದರು.

ತುಕ್ಮೀರ್‌ಪುರ, ಸೋನಿಯಾ ವಿಹಾರ್ ಸೇರಿದಂತೆ ಕರಾವಲ್ ನಗರ ಕ್ಷೇತ್ರದ ವಿವಿಧ ಭಾಗಗಳಲ್ಲಿ ನಿವಾಸಿಗಳ ಅಹವಾಲುಗಳನ್ನು ಆಲಿಸಿ, ಪರಿಹಾರ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ಕ್ಷೇತ್ರದ ಮಹಿಳೆಯರು ತಮ್ಮ ಸಮಸ್ಯೆಗಳು, ಸಲಹೆಗಳು ಮತ್ತು ಬೇಡಿಕೆಗಳನ್ನು ನೇರವಾಗಿ ತಮ್ಮ ಗಮನಕ್ಕೆ ತರಬಹುದು ಎಂದು ಹೇಳಿದರು.

ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆದ ‘ಸೇವಾ ಸಂಕಲ್ಪ’ ಅಭಿಯಾನವನ್ನು ಉಲ್ಲೇಖಿಸಿದ ಮಿಶ್ರಾ, ಸೌಲಭ್ಯವಂಚಿತ ಸಮುದಾಯಗಳಿಗೆ ನೆರವು ನೀಡಲು ಹಾಗೂ ಜನಕಲ್ಯಾಣ ಕಾರ್ಯಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ವಿವಿಧ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು ಎಂದು ತಿಳಿಸಿದರು.

ಸುದ್ದಿ ಓದಿ