ಮುಂದಗೋಡ

ಮುಂದೆ ಗುರಿ ಹಿಂದೆ ಗುರು ಇರಬೇಕು: ವಿ.ಎಸ್‌.ಪಾಟೀಲ

ಮುಂದೆ ಗುರಿ ಹಿಂದೆ ಗುರು ಇರಬೇಕು: ವಿ.ಎಸ್‌.ಪಾಟೀಲ

ಮುಂಡಗೋಡ 05: ಮುಂದೆ ಗುರಿ ಹಿಂದೆ ಗುರು ಇರಬೇಕು ಗುರುಗಳ ಮಾರ್ಗದರ್ಶನ ಪಡೆದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಇದ್ದಾರೆ ಎಂದು ಮಾಜಿ ಶಾಸಕ ವಿ.ಎಸ್‌.ಪಾಟೀಲ ಹೇಳಿದರು.   

ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ತಾಲೂಕು ಶಿಕ್ಷಕರ ದಿನೋತ್ಸವ ಆಚರಣಾ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಎಲ್‌.ವಿ.ಕೆ. ಸಭಾಂಗಣದಲ್ಲಿ ಮಂಗಳವಾರ ಜರುಗಿದ ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ​‍್ಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ ಸಮಾಜದಲ್ಲಿ ಗುರುವಿಗೆ ವಿಶಿಷ್ಟ ಸ್ಥಾನಮಾನವಿದೆ. ಇದೊಂದು ಶ್ರೇಷ್ಟ ವೃತ್ತಿ. ಸಮಾಜಕ್ಕೆ ಮಾದರಿಯಾಗುವ ಶಿಕ್ಷಕರಾಗಬೇಕು ಎಂದರು. ಜಿ.ಪಂ.ಮಾಜಿ ಸದಸ್ಯ ಎಲ್‌.ಟಿ.ಪಾಟೀಲ ಮಾತನಾಡಿದರು.   

ತಹಶೀಲ್ದಾರ ಶಂಕರ ಗೌಡಿ ಮಾತನಾಡಿ ನಮ್ಮ ಬದುಕಿನಲ್ಲಿ ಶಿಕ್ಷಕರು ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕು. ಸಮಾಜದಲ್ಲಿ ಶಿಕ್ಷಣದಿಂದ ಸಾಕಷ್ಟು ಬದಲಾವಣೆ ಆಗಿರುವುದನ್ನು ನಾವು ಕಾಣಬಹುದು. ಜಗತ್ತಿನಲ್ಲಿ ಶಿಕ್ಷಣದ ಮೂಲ ಉದ್ದೇಶ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವುದು ಎಂದರು.  

ಡಾ.ಅನಿತಾ ದೊಡ್ಡಗೌಡರ ಉಪನ್ಯಾಸ ನೀಡಿ ದೇವರನ್ನು ಕಾಣಲು ಗುರುವಿನ ಪಥವನ್ನು ಅರಿಯಬೇಕು. ತಂದೆ, ತಾಯಿ ಮತ್ತು ಗುರುವಿನ ಋಣ ತೀರಿಸಲು ಎಂದೂ ಸಾಧ್ಯವಿಲ್ಲ. ಗುರುವಿನ ಆಶೀರ್ವಾದ ಶಿಷ್ಯನ ಪ್ರಯತ್ನ ಹಾಲು ಜೇನು ಬೆರೆದಂತೆ. ಶಿವಸ್ವರೂಪಿಯಾಗಿ ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ಮೌಢ್ಯಕ್ಕೆ ಕಡಿವಾಣ ಹಾಕುವ ಮೂಲಕ ಗುರುವಾಗುತ್ತಾನೆ. ತಂದೆ ತಾಯಿ ಜನನಕ್ಕೆ ಕಾರಣರಾದರೆ ಗುರು ಬೌದ್ಧಿಕ ವಿಕಾಸಕ್ಕೆ ಕಾರಣರಾಗುತ್ತಾರೆ ಎಂದರು. ಪಿ.ನಾಗೇಂದ್ರ ಉಪನ್ಯಾಸ ನೀಡಿ ವಚನಕಾರರು ಸಮಾನತೆಯ ಸಾಧಕರು. ಶಿಷ್ಯರು ತಾಳ್ಮೆಯ ಗುಣ ಹೊಂದಿರಬೇಕು. ಭವ್ಯ ಭಾರತದ ಭವಿಷ್ಯ ನಾಲ್ಕು ಕೊಠಡಿಗಳಲ್ಲಿ ಅಡಗಿದೆ. ಜ್ಞಾನ ಹಂಚುವುದು ಗುರುಗಳ ಕಾಯಕ. ಇಡಿ ಜಗತ್ತಿನಲ್ಲಿಯೇ ನಮ್ಮನ್ನು ಆಳುತ್ತಿರುವುದು ಜ್ಞಾನ. ನುಡಿದಂತೆ ನಡೆಯುವ ಪ್ರವೃತ್ತಿ ಗುರು ಶಿಷ್ಯ ಇಬ್ಬರಲ್ಲೂ ಇರಬೇಕು. ಗುರು ಶಿಷ್ಯರ ಬಾಂಧವ್ಯ ತುಂಬಾ ಪ್ರಾಮುಖ್ಯತೆ ಪಡೆದಿದೆ ಎಂದರು.ಇದೇ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ತಾ.ಪಂ.ಇಒ ಜಗದೀಶ ಕಮ್ಮಾರ, ಸಿಪಿಐ ಬಿ.ಎಸ್‌.ಲೋಕಾಪುರ, ಜ್ಞಾನೇಶ್ವರ ಗುಡಿಯಾಳ, ಅಹಮ್ಮದ್ ರಜಾಖಾನ್ ಪಠಾಣ, ಶ್ರೀಕಾಂತ ಸಾನು, ದಯಾನಂದ ನಾಯ್ಕ, ಪ್ರದೀಪ ಕುಲಕರ್ಣಿ, ರಮೇಶ ಅಂಬಿಗೇರ, ಶೀಲಾ ರಾಠೋಡ, ಜಿ.ಎನ್‌.ನಾಯ್ಕ, ವಿನಾಯಕ ಶೇಟ್, ಸುಭಾಸ ಡೋರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಸುರೇಶ ಹುದ್ಲೂರ ಹಾಗೂ ಶಿಕ್ಷಕಿಯರು ನಾಡಗೀತೆ ಮತ್ತು ರೈತಗೀತೆ ಹೇಳಿದರು. ಪರಮೇಶ್ವರ ಹೆಗಡೆ ಪ್ರಾರ್ಥಿಸಿದರು. ಬಿಇಒ ಜಕಣಾಚಾರಿ ಸ್ವಾಗತಿಸಿದರು. ಫಕ್ರುದ್ದೀನ್ ಶಿರಹಟ್ಟಿ ನಿರೂಪಿಸಿದರು. 


ಸುದ್ದಿ ಓದಿ