ರಾಣೆಬೆನ್ನೂರ

ಪ್ರತಿಭೆಗಳು ಅಧಿಕ ಪ್ರಮಾಣದಲ್ಲಿದ್ದಾರೆ ಗಾಡ್‌ಫಾದರ್ ಬೇಕು: ಚಂದ್ರು

ಪ್ರತಿಭೆಗಳು ಅಧಿಕ ಪ್ರಮಾಣದಲ್ಲಿದ್ದಾರೆ ಗಾಡ್‌ಫಾದರ್ ಬೇಕು: ಚಂದ್ರು

ಲೋಕದರ್ಶನ ವರದಿ 

ರಾಣೇಬೆನ್ನೂರು 07:  ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರ ವಾಣಿಜ್ಯ ನಗರದ ಚಲನಚಿತ್ರ ರಂಗದ ಯುವ ಪ್ರತಿಭೆ ನಿನಾಸಂ ಚಂದ್ರು ಏಕಲವ್ಯ ಕಲೀವೀರ ಅದ್ದೂರಿ ನಿರ್ಮಾಣದ ಜ್ಯೋತಿ ಆರ್ಟ್ಸ ಲಾಂಛನದಲ್ಲಿ ತೆರೆಕಂಡ ಚಲನಚಿತ್ರವು ಇಲ್ಲಿನ ಎಂ.ಜಿ.ರಸ್ತೆಯಲ್ಲಿರುವ ಶ್ರೀಶಕ್ತಿ ಚಿತ್ರಮಂದಿರದಲ್ಲಿ ಶುಕ್ರವಾರ ಸಾವಿರಾರು ಪ್ರೇಕ್ಷಕರ ಅಭಿಮಾನದ ಸಾಕ್ಷಿಯೊಂದಿಗೆ ಚಿತ್ರ ಪ್ರದರ್ಶನ ಕಂಡಿತು. 

ನಗರದ ಈ ಯುವಕ ಬಾಲ್ಯದಿಂದಲು ಕಲೆಯ ಗೀಳು ಹಂಚಿಕೊಂಡು ಕಲೆ ತನ್ನ ಬದುಕು ಎಂದು ಆರಾಧಿಸುತ್ತಾ ನಿರಂತರ ಪ್ರಯತ್ನದ ಮೂಲಕ ಪ್ರಥಮ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟ ನೀನಾಸಂ ಚಂದ್ರು ರಂಗಭೂಮಿ ಮೂಲದಿಂದ ಬಂದವರಾಗಿದ್ದಾರೆ. ಛಲ ಬಿಡದ ತ್ರಿವಿಕ್ರಮನಂತೆ ಇಂದು ಹೊಸತನದ ನಿರೂಪಣೆಯ ಕಲೀವೀರ ಚಲನಚಿತ್ರದ ಮೂಲಕ ತನ್ನ ಪ್ರತಿಭೆ ಗಾಂಧಿ ನಗರಕ್ಕೆ ಪರಿಚಯಿಸಿದ ಹೆಮ್ಮೆ ಈತನದಾಗಿದೆ. ಇಂದು ಬೆಳ್ಳಂಬೆಳಿಗ್ಗೆ ತನ್ನ ಬಾಲ್ಯದ ಮೂಲ ಸ್ಥಾನ ಚನ್ನಪ್ಪಜ್ಜನ ಮಠಕ್ಕೆ ಹಾಗೂ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ನಂತರ ಭಾರಿ ಅಭಿಮಾನಿಗಳ ಮಧ್ಯ ಮೆರವಣಿಗೆಯಲ್ಲಿ ಸಾಗಿ ಬಂದ ಚಂದ್ರು ಅವರು ಶ್ರೀಶಕ್ತಿ ಚಿತ್ರಮಂದಿರಕ್ಕೆ ಭೆೆಟ್ಟಿ ನೀಡಿ ತನ್ನ ಅಭಿಮಾನಿ ಪ್ರೇಕ್ಷಕರ ಕೈಕುಲಿಕಿ ತಮ್ಮ ಸಂತೋಷ ಹಂಚಿಕೊಂಡರು. 

ಚಿತ್ರಮಂದಿರ ಒಳಗಡೆ ಪ್ರೇಕ್ಷಕರ ಮಧ್ಯದಿಂದಲೇ ಪರದೆಯತ್ತಾ ದಾವಿಸಿದ ಏಕಲವ್ಯ ಕಲೀವೀರ ಚಿತ್ರದ ನಟ ಚಂದ್ರು ಅವರು  ಉತ್ತರ ಕರ್ನಾಟಕದ ಪ್ರತಿಭೆಗಳು ಸಾಕಷ್ಟು ಪ್ರಮಾಣದಲ್ಲಿದ್ದು ಪ್ರತಿಭೆಗೆ ಮಾತ್ರ ಅಲ್ಲಿ ಅವಕಾಶ. ಕೇವಲ ಪ್ರತಿಭೆ ಇದ್ದರೆ ಸಾಲದು ಅದನ್ನು ಸಾಬೀತು ಪಡಿಸಲು ಆರ್ಥಿಕವಾಗಿಯೂ ಸಮರ್ಥವಾಗಿರಬೇಕು. ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುವುದು. ಆದರೆ ತನ್ನಲ್ಲಿರುವ ಕಲೆಯನ್ನು ಗುರುತಿಸಿದ ನನ್ನ ತವರು ಮನೆಯ ಅಭಿಮಾನಿಗಳ, ಸ್ನೇಹಿತರ ಸಹಾಯ, ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಸಹಕಾರದಿಂದ ನಾನು ಪುಳಕಿತಗೊಂಡಿದ್ದು ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡಿದೆ. ಬಹು ವರ್ಷಗಳ ಬೆಳ್ಳಿ ತೆರೆಯ ಕನಸು ನನಸಾದಂತಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ನಿರ್ಮಾಪಕರಾದ ರಾಜು ಪೂಜಾರ, ಹನುಮಂತಪ್ಪ ಪಿ.ಕೆ., ಕೆ.ಎಂ.ಪಿ.ಶ್ರೀನಿವಾಸ ಪವಾರ, ನಿರ್ದೇಶಕ ಅವಿ, ಅಜೇಯ ಹುಲ್ಲತ್ತಿ, ರಮೇಶ ಗುತ್ತಲ, ನಾಗರಾಜ ಪವಾರ(ಮಣಿ), ಪ್ರಕಾಶ ಬುರಡಿಕಟ್ಟಿ, ಬಸವರಾಜ ಐರಣಿ, ಮಲ್ಲಣ್ಣ ಅಂಗಡಿ, ಪಾಂಡುರಂಗ ಗಂಗಾವತಿ, ಸಿದ್ದು ದುಗ್ಗತ್ತಿ, ಬೋಜರಾಜ ರಂಗಾನವರ, ಮಾರುತಿ ಗರಡಿಮನಿ, ಆನಂದ ಠಾಕೂರ, ಸಿದ್ದಪ್ಪ ಐರಣಿ, ಮಲ್ಲಿಕಾರ್ಜುನ ಮಾಗೇನಹಳ್ಳಿ, ಮಂಜುನಾಥ ದುಗ್ಗತ್ತಿ, ಅನಿಲ ಸಿದ್ದಾಳಿ ಸೇರಿದಂತೆ ನೂರಾರು ಅಭಿಮಾನಿಗಳು ಪಾಲ್ಗೊಂಡು ನೀನಾಸಂ ಚಂದ್ರು ಅವರ ಜೊತೆಗಿದ್ದು ಶುಭ ಹಾರೈಸಿದರು. ತೆರೆಕಂಡ ಚಿತ್ರವು ಶ್ರೀಶಕ್ತಿ ಚಿತ್ರಮಂದಿರದಲ್ಲಿ ಜನದಟ್ಟಣೆಯೊಂದಿಗೆ ಮುಂದುವರೆದಿರುವುದು ಆತನ ಸಾಧನೆಗೆ ಮತ್ತು ಹೊಸತನಕ್ಕೆ ಪ್ರೇಕ್ಷಕರು ಸಾಕ್ಷಿಯಾಗುತ್ತಿದ್ದಾರೆ. ಉತ್ತಮ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಎಂದು ಬರಲಾರದು ಎನ್ನುವುದಕ್ಕೆ ಪ್ರದರ್ಶನಗೊಳ್ಳುತ್ತಿರುವ ಚಿತ್ರವು ಮತ್ತು ಸಾಕ್ಷಿಯಾಗುತ್ತಲಿದೆ. 

ಫೋಟೋ:ಹೆಚ್‌-ಆರ್ ಎನ್ ಆರ್ 02 ರಾಣೀಬೆನ್ನೂರ ಶ್ರೀಶಕ್ತಿ ಚಿತ್ರಮಂದಿರದಲ್ಲಿ ಇಂದು ತೆರೆಕಂಡ ಏಕಲವ್ಯ ಕಲೀವೀರ ಚಲನಚಿತ್ರ ಮಂದಿರದ ಮುಂಬಾಗದಲ್ಲಿ ಸೇರಿದ ಜನದಟ್ಟಣೆ ನೋಟ. 


ಸುದ್ದಿ ಓದಿ