ಸರಕಾರಿ ಶಾಲೆಯ ಪ್ರಯೋಜನ ಪಡೆದುಕೊಳ್ಳಿ: ಮಾಮನಿ
ಲೋಕದರ್ಶನ ವರದಿ
ಸವದತ್ತಿ 18: ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತಲೂ ಹೆಚ್ಚಿನ ಸೌಲಭ್ಯಗಳು ದೊರಕುತ್ತಿದ್ದು, ಅದರ ಪ್ರಯೋಜನವನ್ನು ಪ್ರತಿಯೊಬ್ಬರು ಪ್ರಡೆದುಕೊಳ್ಳಬೇಕೆಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಸ್ಥಳೀಯ ಸವಳಭಾವಿ ಓಣಿಯಲ್ಲಿ ನಾಗದೇವರಮೂರ್ತಿ ಪ್ರತಿಷ್ಠಾಪಣೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರಲ್ಲಿ 36 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡ 3 ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ 48 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಲಿರುವ 4 ಕೊಠಡಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ 75 ಕೋಟಿ ರೂ.ಗಳಲ್ಲಿ ಸಾಕಷ್ಟು ಸರಕಾರಿ ಶಾಲೆಗಳನ್ನು ಅಭಿವೃದ್ದಿಗೊಳಿಸಲಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಅವಶ್ಯಕವಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು. ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ತರಕಾರಿ ಮಾರುಕಟ್ಟೆಯನ್ನು ಕೂಡಲೆ ಲೋಕಾರೆ್ಣಗೊಳಿಸಲಾಗುತ್ತಿದ್ದು, ಜಾನುವಾರು ಮಾರುಕಟ್ಟೆಗೂ ಅನುಕೂಲ ಕಲ್ಪಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ ಮಾತನಾಡಿ, ಶಾಸಕ ಆನಂದ ಮಾಮನಿಯವರು ತಾಲೂಕಿನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಪ್ರೇರಣೆ ನೀಡಿ ಅಭಿವೃದ್ದಿಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದರು. ಪಟ್ಟಣದಲ್ಲಿ ಕೂಡಲೆ ನಿರಂತರ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ವಸತಿ ಯೋಜನೆಯಡಿ ಮಂಜೂರಾದ 932 ಮನೆಗಳನ್ನು ಮನೆ ಇಲ್ಲದವರಿಗೆ ಮಾತ್ರ ನೀಡಲಾಗುತ್ತಿದೆ ಎಂದರು.
ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ನಾಗಾರಾಧನೆಯು ಎಲ್ಲ ಧರ್ಮಗಳಲ್ಲಿ ಆಚರಣೆಯಿದ್ದು, ಉರಗ ಸಂತತಿಯ ರಕ್ಷಣೆಯನ್ನು ಮಾಡಬೇಕಿದೆ ಎಂದರು.
ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಸದಸ್ಯರಾದ ಶಿವಾನಂದ ಹೂಗಾರ, ಶಿವನಗೌಡ ಪಾಟೀಲ, ಶಿವಲೀಲಾ ಪಟ್ಟಣಶೆಟ್ಟಿ, ಐ.ಪಿ.ಪಾಟೀಲ, ಅರ್ಜುನ ಅಮ್ಮೋಜಿ, ಮೌಲಾಸಾಬ ತಬ್ಬಲಜಿ, ಧರೆಪ್ಪ ಮಡ್ಲಿ, ವೀರೇಶ ಪ್ರಭುನವರ, ಎಲ್.ಆರ್.ಕುಲಕರ್ಣಿ, ನಿಂಗಪ್ಪ ಬೆಡಸೂರ, ಶಂಕರಗೌಡ ಪಾಟೀಲ, ಮಂಜುನಾಥ ಪಾಚಂಗಿ, ಫಕೀರ್ಪ ಅಡರಗಟ್ಟಿ, ತಾ.ಪಂ ಇಓ ಯಶವಂತಕುಮಾರ, ಎಚ್.ಎ.ಕದರಾಪುರ, ಪ್ರಕಾಶ ಚನ್ನಪ್ಪನವರ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ್ ಕರೀಕಟ್ಟಿ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನಮಂತ ಪೆಟ್ಲೂರ ನಿರೂಪಿಸಿ ವಂದಿಸಿದರು.