ಸೌಂದತ್ತಿ

ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ

ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ

ಅಧಿಕಾರಿಗಳಿಗೆ ಶಾಸಕ ವಿಶ್ವಾಸ ವೈದ್ಯ ಸೂಚನೆ: 16ರಿಂದ ಜಾಕವೆಲ್ ಸ್ವಚ್ಛತೆ 

ಸವದತ್ತಿ 13: ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು 50 ವರ್ಷಗಳ ಹಿಂದೆ ನಿರ್ಮಿಸಿದಂತ ಜಾಕವೆಲ್ಲನ್ನು ಇಲ್ಲಿಯವರೆಗೆ ಯಾರೂ ಸ್ವಚ್ಚ ಮಾಡದೆ ಇರುವದರಿಂದ ಜಾಕವೆಲ್‌ದಿಂದ ಸರಿಯಾಗಿ ನೀರೆತ್ತಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜೂ.16ರಿಂದ ನಾಲ್ಕು ದಿನಗಳ ಕಾಲ ಜಾಕವೆಲ್ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿರುವದರಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗುತ್ತಿರುವದರಿಂದ ಸಾರ್ವಜನಿಕರು ಸಹಕಾರ ನೀಡಬೇಕೆಂದು ಶಾಸಕ ವಿಶ್ವಾಸ ವೈದ್ಯ ಜನರಲ್ಲಿ ಮನವಿ ಮಾಡಿದ್ದಾರೆ. 

ಸ್ಥಳೀಯ ಯಲ್ಲಮ್ಮಾ ಪುರಸಭೆ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈಗ ಪಟ್ಟಣದ ಜನರಿಗೆ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದು, ಜಾಕವೆಲ್ ಸ್ವಚ್ಚತೆ ಮಾಡಿದ ನಂತರ ಕನಿಷ್ಠ ಮೂರು ದಿನಗಳಿಗೊಮ್ಮೆ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದರು. ಜಾಕವೆಲ್ ಸ್ವಚ್ಚತೆ ಕಾರ್ಯವನ್ನು ಖಾಸಗಿ ಕಂಪನಿಯವರಿಗೆ ನೀಡಲಾಗಿದ್ದು, ಸ್ವಚ್ಚತೆಗೆ 4ರಿಂದ 5 ದಿವಸಗಳ ಅವಧಿ ಕೇಳಿರುವದರಿಂದ ನಗರದಲ್ಲಿ ನೀರು ಪೂರೈಕೆಯಲ್ಲಿ ಸ್ವಲ್ಪ ತೊಂದರೆಯಾಗಬಹುದು. ಅದಕ್ಕಾಗಿ ಟ್ಯಾಂಕರ್‌ಗಳ ವ್ಯವಸ್ಥೆಯನ್ನು ಪುರಸಭೆಯಿಂದ ಮಾಡಲಾಗುತ್ತಿದ್ದು, ಅಲ್ಲಲ್ಲಿ ಕೊಳುವೆ ಭಾವಿಗಳು ಮತ್ತು ಜಲಕುಂಭಗಳ ಮುಖಾಂತರ ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. 

ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಮಾತನಾಡಿ, ನಾಲ್ಕು ದಿನಗಳ ಅವಧಿಯಲ್ಲಿ ಹಗಲು ಹೊತ್ತಿನಲ್ಲಿ ಜಾಕವೆಲ್‌ನಲ್ಲಿ ಕೆಲಸ ಮಾಡಲಾಗುತ್ತಿದ್ದು, ರಾತ್ರಿ ಸಮಯದಲ್ಲಿ ನೀರೆತ್ತುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೀರು ಪೂರೈಕೆ ಮಾಡಲಾಗುವುದು ಎಂದರು. ತುರ್ತು ಸಂದರ್ಭದಲ್ಲಿ ಟ್ಯಾಂಕರಗಳ ಮೂಲಕ ನೀರನ್ನು ಪೂರೈಸಲಾಗುವುದು. ನಗರದಲ್ಲಿ 32 ಪವರ ಪಂಪಗಳಿದ್ದು, 88 ಸಿಸ್ಟಮ್‌ಗಳ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿರುವದರಿಂದ ನಾಲ್ಕೈದು ದಿನಗಳವರೆಗೆ ನೀರು ಪೂರೈಕೆಯಲ್ಲಿ ತೊಂದರೆಯಾದರೆ ಸಾರ್ವಜನಿಕರು ಸಹಕಾರ ನೀಡಬೇಕೆಂದರು. 

ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ ಮಾತನಾಡಿ, ಪಟ್ಟಣಕ್ಕೆ 24/7 ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಅದರ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಕನಿಷ್ಟ ಇನ್ನೂ ಒಂದುವರೆ ವರ್ಷ ಬೇಕಾಗಬಹುದು. 92.65ಕೋಟಿ ರೂ.ಗಳಲ್ಲಿ 2055ನೇ ಇಸ್ವಿಯವರೆಗಿನ ಜನಸಂಖ್ಯೆ ಆಧಾರವಾಗಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ ಎಂದರು. ಅಲ್ಲಿಯವರೆಗೆ ಜನರಿಗೆ ತೊಂದರೆಯಾಗದಂತೆ ಇರುವಂತ ವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಸೂಕ್ತ ಕುಡಿಯುವ ನೀರನ್ನು ಪೂರೈಸುವಂತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದರು. 

ಉಪಾಧ್ಯಕ್ಷ ದೀಪಕ ಜಾನ್ವೇಕರ, ಸದಸ್ಯರಾದ ಬಾಪೂಸಾಬ ಚೂರಿಖಾನ, ಮಲ್ಲಿಕಾರ್ಜುನ ಪುರದಗುಡಿ, ಸಂಗಮೇಶ ಹಾದಿಮನಿ, ಶಿವಾನಂದ ಪಟ್ಟಣಶೆಟ್ಟಿ, ಸುತಗಟ್ಟಿ, ಯಲ್ಲಪ್ಪ ರುದ್ರಾಕ್ಷಿ, ಜೆಇ ನಿರ್ಮಲಾ ನಾಯಕ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ