ಆ. 15 ರವರೆಗೆ ತಾಜ್ ಮಹಲ್ ಸಾರ್ವಜನಿಕ ವೀಕ್ಷಣೆಯಿಲ್ಲ
ಆಗ್ರಾ, ಜುಲೈ 29: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರವರೆಗೆ ತಾಜ್ಮಹಲ್ ಸಾರ್ವಜನಿಕರಿಗೆ ತೆರೆಯುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಜುಲೈ 6 ರಿಂದ ಎಲ್ಲಾ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾಗಲಿವೆ ಎಂದು ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದರು.
ನಂತರ ದೇಶಾದ್ಯಂತ ಎರಡು ಸಾವಿರಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ತೆರೆಯಲಾಗಿತ್ತು. ಆಗ್ರಾದಲ್ಲಿ ತಾಜ್ ಮಹಲ್ ಸೇರಿದಂತೆ ಕೆಲವೇ ಸ್ಮಾರಕಗಳು ಇನ್ನೂ ತೆರೆಯಲಾಗಿಲ್ಲ.
ಈ ಪ್ರದೇಶಗಳು ಕಂಟೈನ್ಮೆಂಟ್ ಜೋನ್ಗೆ ಒಳಪಡದೆ ಬಫರ್ ಜೋನ್ನಲ್ಲಿದ್ದರೆ ಈಗಲೇ ತೆರೆಯಲು ಸಮ್ಮತಿ ಸೂಚಿಸುತ್ತೇವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ನರೇನ್ ಸಿಂಗ್ ತಿಳಿಸಿದ್ದಾರೆ.
ನಗರದಲ್ಲಿ 55 ಹೊಸ ಪ್ರಕರಣಗಳು ಪತ್ತೆಯಾಗಿವೆ. 70 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿವೆ. ಶೀಘ್ರವೇ ಹೊಸ ನಿಯಮಗಳು ಬರಲಿದ್ದು, ಮುಂದಿನ 2ರಿಂದ 4 ವಾರಗಳ ಕಾಲ ಸ್ಮಾರಕಗಳನ್ನು ತೆರೆಯದೇ ಇರಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.