ರಸ್ತೆ ಅತಿಕ್ರಮಣವಾಗಿದ್ದು ಸರ್ವೆ ಮಾಡಿ ಹದ್ದು ಬಸ್ತ ಗುರುತು ಮಾಡಿ ; ಶಾಸಕ ಶ್ರೀಮಂತ ಪಾಟೀಲ ಸೂಚನೆ: ಸಂಬರಗಿ ಗ್ರಾಮ ಸಭೆ
ಲೋಕದರ್ಶನ ವರದಿ
ಅಥಣಿ 06: ಗ್ರಾಮಸ್ಥರ ಅನುಕೂಲಕ್ಕಾಗಿ ಅನುಷ್ಠಾನಗೊಳಿಸಿದ ಸರಕಾರಿ ಯೋಜನೆಗಳನ್ನು ಪೂರ್ಣಗೊಳಿಸಲು ಎಲ್ಲರೂ ಸಹಕರಿಸಿ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸಂಬರಗಿ ಗ್ರಾಮಸ್ಥರಿಗೆ ಮನವಿ ಮಾಡಿದರು.
ತಾಲೂಕಿನ ಸಂಬರಗಿ ಗ್ರಾಮದ ಚಂದ್ರಗಿರಿ ದೇವಸ್ಥಾನದಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಜರುಗಿದ ಗ್ರಾಮ ಸಭೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಬರಗಿ-ನಾಗನೂರ ಸಂಪರ್ಕ ರಸ್ತೆ ಅತಿಕ್ರಮಣ ಆಗಿದ್ದರಿಂದ ಸರ್ವೆ ಮಾಡಿ ರಸ್ತೆ ಹದ್ದು ಬಸ್ತ ಗುರುತು ಮಾಡಬೇಕು ಎಂದು ಸರ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದಲ್ಲಿರುವ ವೆಟರ್ನರಿ ಆಸ್ಪತ್ರೆ ಗಲೀಜು ಆಗಿದ್ದು, ಈ ಆವರಣವನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯತ ಅಧಿಕಾರಿಗೆ ಸೂಚಿಸಿದರು. ಸರಕಾರಿ ಆಸ್ಪತ್ರೆ, ಸಂಬರಗಿ ನಾಗನೂರು ಗ್ರಾಮದ ಮಧ್ಯದ ರಸ್ತೆ ಅತಿಕ್ರಮಣ ತೆರವುಗೊಳಿಸಲು ಸರ್ವೆ ಅಧಿಕಾರಿಗಳಿಗೆ ಆದೇಶಿಸಿದರು.
ಅಗ್ರಹಾರಿಣಿ ಚಿಕ್ಕ ನದಿ ಸ್ವಚ್ಛಗೊಳಿಸುವ ಸಂಬಂಧ ಉದ್ಯೋಗ ಖಾತ್ರಿ ಯೋಜನೆಯಡಿ 8.05ಕೋಟಿ ಅನುದಾನ ಮಂಜೂರಾಗಿದ್ದು, ಈ ಅನುದಾನವನ್ನು ಅಗ್ರಹಾರಿಣಿ ನದಿ ದಡದ ಗ್ರಾಮ ಪಂಚಾಯತಗಳ ಮೂಲಕ ಈ ಅನುದಾನ ಅನುಷ್ಠಾನಗೊಳಿಸಲಾಗುವುದು ಮತ್ತು ಖಿಳೆಗಾಂವ ಬಸವೇಶ್ವರ ಯೋಜನೆ ಅನುಷ್ಠಾನಗೊಳ್ಳುವುದರಿಂದ ಅಗ್ರಹಾರಿಣಿ ನದಿ ವರ್ಷವಿಡಿ ತುಂಬಿ ಹರಿಯುತ್ತದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನೇಕ ಕಡೆ ಕಾರ್ಮಿಕರ ಮೂಲಕ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಉಚಿತವಾಗಿ ಜೆಸಿಬಿ ಮೂಲಕ ಕೆಲಸ ಮಾಡಿಕೊಡುತ್ತೇವೆ ಎಂದರು.
ಬಿಜೆಪಿ ಧುರೀಣ ಬಸಗೌಡ ಪಾಟೀಲ (ನಾಗನೂರು ಪಿ.ಎ) ಪವಾರ ಲಾಂಡಗೆ ತೊಟದಲ್ಲಿ ಈಗಾಗಲೇ ನಿರ್ಮಿಸಲಾದ ನೀರಿನ ಟ್ಯಾಂಕಗೆ ಪೈಪ್ ಲೈನ್ ಕೂಡ ಮಾಡಲಾಗಿದೆ ಆದರೆ ಟ್ಯಾಂಕಗೆ ನೀರು ಪೂರೈಕೆಯಾಗುತ್ತಿಲ್ಲ ಇದರಿಂದ ತೋಟದ ವಸತಿಗಳಿಗೆ ನೀರು ಪೂರೈಕೆಯಾಗುವುದಿಲ್ಲ ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು. ಸರಕಾರಿ ಕನ್ನಡ ಶಾಲೆಯ ಪಕ್ಕದಲ್ಲಿಯೇ ಹೆಸ್ಕಾಂ ಇಲಾಖೆಯವರು ಟಿಸಿ ಅಳವಡಿಸಿದ್ದು ಇದು ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಎದುರಾಗಿದೆ ಹೀಗಾಗಿ ಟಿಸಿಯನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ ಸುರೇಶ್ ಮುಂಜೆ, ಗ್ರಾಪಂ ಅಧ್ಯಕ್ಷೆ ಸಾರಿಕಾ ಸಾತಪುತೆ, ತಾಪಂ ಅಧಿಕಾರಿ ಶೇಖರ ಕರಬಸಪ್ಪಗೋಳ, ಪಂಚಾಯತ್ ರಾಜ್ ಇಲಾಖೆಯ ವೀರಣ್ಣಾ ವಾಲಿ, ಸಮಾಜ ಕಲ್ಯಾಣ ಇಲಾಖೆಯ ಪ್ರವೀಣ ಪಾಟೀಲ, ದೇವರಾಜ್ ಅರಸ್ ನಿಗಮದ ವೆಂಕಟೇಶ ಕುಲಕರ್ಣಿ, ಹೆಸ್ಕಾಂ ವಿಭಾಗದ ವಿಜಯಕುಮಾರ ಕೋಲಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಧರೆಪ್ಪ ತೇಲಿ, ಶಿವಾಜಿ ಸಾತಪುತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಜೀವಕುಮಾರ ಸದಲಗೆ, ಧುರೀಣರಾದ ಮುರಳೀಧರ ದೇಶಪಾಂಡೆ, ರಾಮ ಸೊಡ್ಡಿ, ವಿಶ್ವನಾಥ ದೇವಮಾನೆ, ಅಬ್ದುಲ್ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.