ರಾಜೀವ್ ಗಾಂಧಿ ಹತ್ಯೆ ಅಪರಾಧಿಗೆ ಒಂದು ವಾರ ಪೆರೋಲ್ ವಿಸ್ತರಿಸಿದ ಸುಪ್ರೀಂಕೋರ್ಟ್
ನವದೆಹಲಿ,
ನವೆಂಬರ್ 23: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಅಪರಾಧಿ ಎ.ಜಿ.ಪೆರರಿವಲನ್
ಅವರ ಪೆರೋಲ್ ಅವಧಿಯನ್ನು ಒಂದು ವಾರದವರೆಗೆ ವಿಸ್ತರಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಪೆರೋಲ್ ವಿಸ್ತರಣೆ ಕೋರಿ ಪೆರರಿವಲನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎಲ್.ನಾಗೇಶ್ವರರಾವ್, ಹೇಮಂತ್ ಗುಪ್ತ ಮತ್ತು ಅಜಯ್ ರಸ್ತೋಗಿ ಅವರಿದ್ದ ತ್ರಿಸದಸ್ಯ ಪೀಠ, ಪೆರೋಲ್ ಅನ್ನು ಒಂದು ವಾರದ ಕಾಲ ವಿಸ್ತರಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತು. ಜೊತೆಗೆ, ವಿಚಾರಣೆಯನ್ನು 2021ರ ಜನವರಿ ತಿಂಗಳಿಗೆ ಮುಂದೂಡಿತು.
ಪೆರರಿವಲನ್ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆಯ ಜೊತೆಗೆ, ವೈದ್ಯಕೀಯ ಪರೀಕ್ಷೆಗಳನ್ನು ಕೂಡ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.
ಪೆರರಿವಲನ್ ಅ.30ರಂದು ಪೆರೋಲ್ ಮೇಲೆ ಹೊರಬಂದಿದ್ದು, ಅದರ ಅವಧಿ ಸೋಮವಾರಕ್ಕೆ ಅಂತ್ಯಗೊಳ್ಳಬೇಕಿತ್ತು.
ಈ ನಡುವೆ, ಪೆರರಿವಲನ್ ಅವರ ಬಿಡುಗಡೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.