ಪರಸ್ಪರ ಸಹಾಯ ಸಹಕಾರ ನೀಡುವುದೇ ಮಾನವ ಧರ್ಮ: ಚಂದ್ರಣ್ಣ ಬೇಡರ
ರಾಣೆಬೆನ್ನೂರು 30: ಕೊರೊನಾ ಮಹಾಮಾರಿ ರೋಗದಿಂದಾಗಿ ಪ್ರತಿಯೊಬ್ಬ ನಾಗರಿಕರು ತಮ್ಮ ಆರ್ಥಿಕ ಸ್ಥಿತಿಯನ್ನು ಕಳೆದುಕೊಂಡು ಬದುಕನ್ನು ನಿರ್ವಹಿಸುವುದೇ ಕಷ್ಟಕರ ಪರಿಸ್ಥಿತಿಯಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಇದ್ದವರು ಪರಸ್ಪರ ಸಹಾಯ - ಸಹಕಾರ ನೀಡುವುದೇ ನಿಜವಾದ ಮಾನವ ಧರ್ಮವಾಗಿದೆ ಎಂದು ತಾಲೂಕಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಚಂದ್ರಣ್ಣ ಬೇಡರ ಹೇಳಿದರು.
ಅವರು ಇಲ್ಲಿನ ನಾಯಕ ಸಭಾಭವನದಲ್ಲಿ ಸಮಾಜಸೇವಕ ಗುಡಗೂರಿನ ಸಂಜೀವ ಶಿಡಗನಾಳ ಅವರು ತಮ್ಮ ಸೇವಾ ಯೋಜನೆಯಲ್ಲಿ ಫ್ರಂಟ್ಲೈನ್ ವಾರಿಯರ್ಸ್ಗೆ ಕೊಡಮಾಡಿದ ಧವಸ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು. ಯುವಕರು ಈ ದೇಶದ ಭವಿಷ್ಯದ ರೂವಾರಿಗಳು. ಸಮಾಜದಲ್ಲಿ ಅಸಮಾನತೆ ಮತ್ತು ಜನಸಾಮಾನ್ಯರ ಮಾನಸಿಕ ಸಮಾನತೆಗಾಗಿ ತಮ್ಮ ವೈಚಾರಿಕ ಚಿಂತನೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಾಗ ಮಾತ್ರ ಸಮಾನತೆ ಸಾಧಿಸಲು ಸಾಧಿಸಲು ಸಾಧ್ಯವಾಗುವುದು ಎಂದ ಅವರು, ಯುವ ನಾಯಕ ಸಂಜೀವ ಅವರ ಈ ಸೇವಾ ಕಾರ್ಯವು ಇತರರಿಗೆ ಮಾದರಿಯಾಗಿದೆ ಎಂದರು.
ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಕೊರೊನಾ ವೈರಸ್ ಪರಿಣಾಮ ಜನ ಸಾಮಾನ್ಯರ ಬದುಕು ದಿಕ್ಕಾಪಾಲಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ದಾನವನ್ನು ನೀಡುವುದರ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು. ಅದರಿಂದ ಯಾವುದೇ ಸಮುದಾಯ ತೊಂದರೆಯಲ್ಲಿದ್ದರೂ ಅಲ್ಪಮಟ್ಟಿಗಾದರೂ ಹೊರ ಬರಲು ಚೇತರಿಕೆ ನೀಡಿದಂತಾಗುತ್ತದೆ. ಇಂದು ಸಮಾಜದಲ್ಲಿ ಫ್ರಂಟ್ಲೈನ್ ವಾರಿಯರ್ಸಗಳಾಗಿ ಆಶಾ, ಅಂಗನವಾಡಿ ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರು ತಮ್ಮ ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಅಂತವರ ಸೇವೆ ಸದಾ ಸ್ಮರಣೀಯವಾಗಿದೆ ಎಂದರು.
ಏಕಲವ್ಯ ಬ್ಯಾಂಕಿನ ಅಧ್ಯಕ್ಷ ನಿಂಗಪ್ಪ ಹಳ್ಳಳ್ಳೆಪ್ಪನವರ ಅವರು ಮಾತನಾಡಿ, ಯುವಕರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಮತ್ತು ಸಹಕಾರ ನೀಡಬಹುದು ಎನ್ನುವುದಕ್ಕೆ ಇಂದು ನಮ್ಮ ಮಧ್ಯೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಸಾಮಾಜಿಕ ಚಿಂತಕ ಸಂಜೀವ ಶಿಡಗನಾಳ ಮಾದರಿಯಾಗಿದ್ದಾರೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮೌನೇಶ ತಳವಾರ, ಹನುಮಂತಪ್ಪ ಮೀನಕಟ್ಟಿ, ಅಶೋಕ ನಾಯಕ, ಅಂಬರೀಷ್, ಶಿವಕುಮಾರ ಓಲೇಕಾರ, ಹನುಮಂತಪ್ಪ ಕಬ್ಬಾರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.