ಅಥಣಿ ಜಿಲ್ಲಾ ಹೋರಾಟಕ್ಕೆ ಬೆಂಬಲ: ಹೋರಾಟದಲ್ಲಿ 25 ಸಾವಿರ ಜನ ಪಾಲ್ಗೊಳ್ಳುವ ನೀರೀಕ್ಷೆ
ಅಥಣಿ 08: ಶಾಸಕ, ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ನೇತೃತ್ವದ ಅಥಣಿ ಜಿಲ್ಲಾ ಹೋರಾಟಕ್ಕೆ ಪಕ್ಷಾತೀತವಾಗಿ ಪುರಸಭೆಯ ಎಲ್ಲ 27 ಸದಸ್ಯರು ಮತ್ತು ಪ್ರತಿಸ್ಪರ್ಧಿಗಳು ಬೆಂಬಲ ವ್ಯಕ್ತಪಡಿಸಿ ಅಥಣಿ ಪಟ್ಟಣದಿಂದ ಕನಿಷ್ಠ 20 ರಿಂದ 25 ಸಾವಿರ ಜನ ಪಾಲ್ಗೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಪ್ರಯತ್ನಿಸುತ್ತೇವೆ ಎಂದು ಪುರಸಭೆಯ ಹಿರಿಯ ದತ್ರಾ ವಾಸ್ಟರ್ ಹೇಳಿದರು.
ಅವರು ಪುರಸಭಾ ಸದಸ್ಯರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಅಥಣಿ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದ್ದು, ಅಥಣಿಯಲ್ಲಿ 5 ಸಕ್ಕರೆ ಕಾರಖಾನೆಗಳು, 2 ಇಥೆನಾಲ್ ಕಾರಖಾನೆಗಳು ಸೇರಿದಂತೆ ಅನೇಕ ಸಣ್ಣಪುಟ್ಟ ಕಾರಖಾನೆಗಳು ಕಾರ್ಯನಿರ್ವಹಿಸುತ್ತಿವೆ ಜೊತೆಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ಅಥಣಿ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದ್ದು, ಡಿಸೆಂಬರ 11 ರಂದು ನಡೆಯುವ ಹೋರಾಟ ನಮ್ಮ ಜನರನ್ನು ಜಾಗೃತಿಗೊಳಿಸುವ ಮತ್ತು ಸರಕಾರದ ಗಮನ ಸೆಳೆಯುವ ಉದ್ದೇಶ ಹೊಂದಿದೆ ಎಂದರು. ಅಥಣಿ ಜಿಲ್ಲಾ ಹೋರಾಟಕ್ಕೆ ಜಮಖಂಡಿ ತಾಲೂಕಿನ ಸಾವಳಗಿ, ರಾಯಬಾಗ ತಾಲೂಕಿನ ಹಾರೂಗೇರಿ, ಕಾಗವಾಡ ತಾಲೂಕಿನ ಜನತೆಯೂ ಕೂಡ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದು, ಅಥಣಿ ಜಿಲ್ಲೆಯಾಗುವವರೆಗೂ ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದ ಅವರು ಹೋರಾಟ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಶಿವಕುಮಾರ ಸವದಿ ಅನೇಕ ದಿನಗಳಿಂದ ಹೋರಾಟದ ರೂಪುರೇಷೆ ಗಳನ್ನು ರೂಪಿಸುತ್ತಿದ್ದಾರೆ ಎಂದರು.
ಪುರಸಭಾ ಸದಸ್ಯ ರಿಯಾಜ ಸನದಿ ಮಾತನಾಡಿ, ಪುರಸಭೆಯ ಎಲ್ಲ ಸದಸ್ಯರ ನೇತೃತ್ವದಲ್ಲಿ ಜಿಲ್ಲಾ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಪ್ರತಿ ಮನೆ ಮನೆಗೆ ತೆರಳಿ ಮನವಿ ಮಾಡುತ್ತೇವೆ ಎಂದ ಅವರು ಡಿಸೆಂಬರ 11 ರ ಹೋರಾಟದಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಪುರಸಭಾ ಸದಸ್ಯ ಪ್ರಮೋದ ಬಿಳ್ಳೂರ ಮಾತನಾಡಿ, ಹೋರಾಟಕ್ಕೆ ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಸರಕಾರಿ ನೌಕರರು, ಸಹಕಾರ ಸಂಘಗಳ ಸದಸ್ಯರು, ಸಿಬ್ಬಂದಿ ಸೇರಿದಂತೆ ಎಲ್ಲರೂ ಬೆಂಬಲ ನೀಡುತ್ತಿದ್ದು, ಹೋರಾಟದಲ್ಲಿ ಕನಿಷ್ಠ 20 ರಿಂದ 25 ಸಾವಿರ ಜನ ಸೇರುವುದು ಖಚಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಉದ್ಯಮಿ ಶಿವುಕುಮಾರ ಸವದಿ, ಪುರಸಭೆಯ ಸದಸ್ಯರಾದ ದಿಲಿಪ ಲೋಣಾರೆ, ರಾಜಶೇಖರ ಗುಡೋಡಗಿ, ತಿಪ್ಪಣ್ಣ ಭಜಂತ್ರಿ, ಮಲ್ಲು ಬುಟಾಳಿ, ಉದಯ ಸೊಳಸಿ, ಬೀರ್ಪ ಯಕ್ಕಂಚಿ, ಜಿಲ್ಲಾ ಹೋರಾಟ ಸಮಿತಿಯ ಪ್ರಶಾಂತ ತೊಡಕರ, ಶಿವರುದ್ರ ಘೂಳಪ್ಪನವರ ಸೇರಿದಂತೆ ಪುರಸಭೆಯ ಎಲ್ಲ ಸದಸ್ಯರು, ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.