ಅಥಣಿ

ಕೆಎಂಎಫ್‌ಗೆ ಒಳ್ಳೆಯ ಗುಣಮಟ್ಟದ, ಕಲಬೆರಕೆ ರಹಿತ ಹಾಲನ್ನು ಪೂರೈಸಿ

ಕೆಎಂಎಫ್‌ಗೆ ಒಳ್ಳೆಯ ಗುಣಮಟ್ಟದ, ಕಲಬೆರಕೆ ರಹಿತ ಹಾಲನ್ನು ಪೂರೈಸಿ

ವ್ಯವಸ್ಥಾಪಕ ನಿರ್ದೆಶಕ ಜಿ.ಶ್ರೀನಿವಾಸನ್ ಕರೆ: ಹಾಲು ಪೂರೈಕೆದಾರರಿಂದ ವಿವಿಧ ಬೇಡಿಕೆಗಳ ಮನವಿ 

ಅಥಣಿ 23: ಕೆಎಂಎಫ್‌ಗೆ ಒಳ್ಳೆಯ ಗುಣಮಟ್ಟದ, ಕಲಬೆರಕೆ ರಹಿತ ಹಾಲನ್ನು ಪೂರೈಸಿ ಎಂದು ಕೆಎಂಎಫ್ ಬೆಳಗಾವಿ ವಿಭಾಗದ ವ್ಯವಸ್ಥಾಪಕ ನಿರ್ದೆಶಕ ಜಿ.ಶ್ರೀನಿವಾಸನ್ ಹಾಲು ಪೂರೈಕೆದಾರರಲ್ಲಿ ಮನವಿ ಮಾಡಿದರು. 

ಅವರು ಅಥಣಿಯಲ್ಲಿ ಹಾಲು ಪೂರೈಕೆದಾರರ ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಿ ಮಾತನಾಡುತ್ತಿದ್ದರು. ಕೆಎಂಎಫ್ ನಂದಿನಿ ಹಾಲು ಹಾಗೂ ಹಾಲಿನ ಇತರೆ ಉತ್ಪನ್ನಗಳ ಮೂಲಕ ರಾಜ್ಯದ ಜನತೆಯ ವಿಶ್ವಾಸಗಳಿಸಿದೆ. ಇದಕ್ಕಾಗಿಯೇ ಗುಣಮಟ್ಟದ ಹಾಲು ಪೂರೈಕೆ ಮಾಡುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂಗಳ ಸಹಾಯ ಧನ ಕೂಡ ನೀಡಲಾಗುತ್ತಿದೆ ಎಂದ ಅವರು ರೈತರು ಕಲಬೆರಕೆ ಅಥವಾ ಕಡಿಮೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬಾರದು ಎಂದು ಮನವಿ ಮಾಡಿದರು. 

ರೈತರು ಪೂರೈಸಿದ ಹಾಲು 8.4 ಅಥವಾ 8.5 ಎಸ್‌ಎನ್‌ಎಫ್ ಇದ್ದಲ್ಲಿ ಮಾತ್ರ ಗುಣಮಟ್ಟದ ಹಾಲು ಎಂದು ಪರಿಗಣಿಸಿ ಸಹಾಯಧನ ಕೊಡಲಾಗುತ್ತದೆ ಎಂದರು. ಇದಕ್ಕಾಗಿ ರೈತರು ಜಾನುವಾರುಗಳಿಗೆ ಗುಣಮಟ್ಟದ ಮೇವು ಹಾಗೂ ಆಹಾರ ಕೊಡಬೇಕು ಎಂದ ಅವರು ರೈತರ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. 

ಕೆಎಂಎಫ್ ನಿರ್ದೆಶಕ ಅಪ್ಪಾಸಾಹೇಬ ಅವತಾಡೆ ಮಾತನಾಡಿ, ಸರಕಾರದ ನಿಯಮಾನುಸಾರ ರೈತರು ಪೂರೈಸುವ ಹಾಲಿಗೆ ಎಸ್‌ಎನ್‌ಎಫ್ ಹಾಲಿಗೂ ಸಹಾಯಧನ ಕೊಡಬೇಕೆಂದು ಸರಕಾರದ ಮಟ್ಟದಲ್ಲಿ ಚರ್ಚಿಸುವೆ ಎಂದರು. 

ಹಾಲು ಪೂರೈಕೆದಾರರ ಪರವಾಗಿ ಅಭಯ ಪಾಟೀಲ ಮಾತನಾಡಿ ಕೆಎಂಎಫ್‌ಗೆ ಹಾಲನ್ನು ಸಹಕಾರ ಸಂಘಗಳ ಮೂಲಕ ಹಾಲು ಪೂರೈಕೆ ಮಾಡುತ್ತೇವೆ. ಈ ಸಂಘಗಳನ್ನು ನಿರ್ವಹಣೆ ಮಾಡಲು ಪ್ರತಿ ಲೀಟರ್ ಹಾಲಿಗೆ 1.59 ಪೈಸೆ ನೀಡಬೇಕು. ಆದರೆ ಸಂಘಕ್ಕೆ ಕೇವಲ 60 ಪೈಸೆ ಮಾತ್ರ ಬರುತ್ತದೆ ಇದರಿಂದ ಸಂಘಗಳ ನಿರ್ವಹಣೆ ಆಗುತ್ತಿಲ್ಲ ಮತ್ತು 8.3 ಅಥವಾ ಇದಕ್ಕಿಂತ ಕಡಿಮೆ ಎಸ್ ಎನ್ ಎಫ್ ಬಂದಲ್ಲಿ ಪ್ರತಿ ಲೀಟರ್ ಹಾಲಿಗೆ 4 ರೂ ದಂಡ ಹಾಕುತ್ತಿದ್ದು, ದಂಡ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. 

ದೀಪಕ ಸೂರ್ಯವಂಶಿ, ಲಕ್ಷ್ಮಣ ಮರನೂರ, ಜಗದೀಶ ನಾಯಿಕ, ಮಾಹಾಂತೇಶ ಪೂಜಾರಿ, ಬಾಬಾಸಾಹೇಬ ಜಾಧವ, ದಶರಥ ಸಾಳುಂಕೆ, ರತ್ನಪ್ಪ ಅಂಬಾಜಿ, ಅನೀಲ ಸಾಳುಂಕೆ ಸೇರಿದಂತೆ ಅನೇಕ ಹಾಲು ಪೂರೈಕೆದಾರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ