ನೋವಿನಿಂದ ಪತ್ರ ಬರೆದ ಸುದೀಪ್: ಪುನೀತ್ರನ್ನ ನೆನೆದಿದ್ದು ಹೀಗೆ
ಬೆಂಗಳೂರು: ಅ, 30: ನಟ ಕಿಚ್ಚ ಸುದೀಪ್ ತಮ್ಮ ಆತ್ಮೀಯ ಗೆಳೆಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಭಾವಪೂರ್ಣ ಪತ್ರ ಬರೆಯುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಪುನೀತ್ ಅವರು ಹುಟ್ಟುತ್ತಲೇ ಸ್ಟಾರ್ ಆಗಿದ್ದರು. ನಾನು ಶಿವಮೊಗ್ಗದಲ್ಲಿ ಅವರನ್ನು ಮೊದಲು ಭೇಟಿಯಾದಾಗ ಅವರು ಆಗಲೇ ಸ್ಟಾರ್ ಆಗಿದ್ದರು. "ಭಾಗ್ಯವಂತ" ಸಿನಿಮಾ ಆಗ ಹಿಟ್ ಆಗಿತ್ತು. ನನ್ನ ತಂದೆಗೆ ಚಿತ್ರರಂಗದ ನಂಟು ಇದ್ದಿದ್ದರಿಂದ ಅವರನ್ನು ಮನೆಗೆ ಊಟಕ್ಕೆ ಕರೆದರು. ಆಗ ಮನೆಗೆ ಬಂದ ಪುನೀತ್ ಊಟಕ್ಕಿಂತ ನನ್ನ ಆಟಿಕೆಗಳ ಬಗ್ಗೆಯೇ ಹೆಚ್ಚು ಆಸಕ್ತಿ ಹೊಂದಿದ್ದರು. ಬಳಿಕ ನಾನು ಮತ್ತು ಅವರು ಆಟ ಆಡಲು ಪ್ರಾರಂಭಿಸಿದೆವು ಎಂದು ಸುದೀಪ್ ಬಾಲ್ಯದ ನೆನಪನ್ನು ಸ್ಮರಿಸಿದ್ದಾರೆ.
ನೆರೆಹೊರೆಯವರು ಮತ್ತು ಸುತ್ತಮುತ್ತಲಿನ ಮಕ್ಕಳು ನಮ್ಮ ಮನೆಯ ಸುತ್ತಲೂ ಜಮಾಯಿಸಿದ್ದರು. ಏಕೆಂದರೆ ನನ್ನ ಜೊತೆ ಇದ್ದಿದ್ದು, ಸ್ಟಾರ್ ಕಿಡ್ ಮತ್ತು ಡಾ. ರಾಜ್‌ಕುಮಾರ್ ಅವರ ಮಗ ಪುನೀತ್. ಅವರು ನನಗೆ ಸ್ನೇಹಿತ ಮಾತ್ರವಲ್ಲ, ಉತ್ತಮ ಪ್ರತಿಸ್ಪರ್ಧಿ ಕೂಡ ಆಗಿದ್ದರು. ಅಸಾಧಾರಣ ನಟ, ನೃತ್ಯಗಾರ, ಫೈಟರ್ ಮತ್ತು ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದು ಅವರು ಅಂದಿದ್ದಾರೆ.
ಶಿವಣ್ಣ ಅವರನ್ನು ಆ ಸ್ಥಿತಿಯಲ್ಲಿ ನೋಡಿ ಮತ್ತಷ್ಟು ನೋವಾಯಿತು. ಪ್ರತಿಯೊಬ್ಬರು ಅವರ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ. ಇದನ್ನು ಎಲ್ಲರೂ ಒಪ್ಪಿಕೊಳ್ಳಲು ಬಹಳ ಸಮಯ ಬೇಕು. ಅವರ ಸ್ಥಾನವನ್ನು ಯಾರೂ ತುಂಬಲಾರರು. "ಪುನೀತ್" .... ನಮ್ಮ ಪ್ರೀತಿಯ "ಅಪ್ಪು"ನನ್ನು ಶಾಂತಿಯಿಂದ ಕಳಿಸಿಕೊಡೋಣಾ ಎಂದು ಸುದೀಪ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.