ಶನೈಶ್ಚರ ಮಂದಿರದಲ್ಲಿ ಪಂಚಮ ಮಂಡಲೋತ್ಸವ ಯಶಸ್ವಿ
ರಾಣಿಬೆನ್ನೂರ 13: ಹೆಚ್ಚುತ್ತಿರುವ ವಿದೇಶಿ ವ್ಯಾಮೋಹದ ಇಂತಹ ಪರಿಸ್ಥಿತಿಯಲ್ಲಿ ಬಹುತೇಕ ಜನರು ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯಿಂದ ದೂರ ಉಳಿಯುತ್ತಿದ್ದು, ಇದರಿಂದ ಧರ್ಮದ ಆಚರಣೆಗಳು ಬಹಳಷ್ಟು ಕ್ಷೀಣಿಸುತ್ತಿವೆ. ಸಮಾಜದಲ್ಲಿ ಇಂದೂ ಸಹ ಧರ್ಮದ ಕಾರ್ಯಗಳು ಎಲ್ಲಡೆ ನಿರಂತರವಾಗಿ ಮುನ್ನಡೆಯಲು ಸ್ಪೂರ್ತಿ ಪಡೆದ ಅಸಂಖ್ಯ ಅಭಿಮಾನಿಗಳು, ಭಕ್ತರು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದಾರೆ ಎಂದು ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರಸ್ವಾಮಿ ಮಂದಿರದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪ್ರದೇಶಾಭಿವೃದ್ದಿಗಾಗಿ ನಿರಂತರ 384 ದಿನಗಳ ಕಾಲದ ಮಹಾಮೃತ್ಯುಂಜಯ ಜಪ, ಯಾಗ, ಶ್ರೀ ದುರ್ಗಾ ಜಪ, ಹವನ ಮತ್ತು ದೀಪದುರ್ಗಾ ನಮಸ್ಕಾರ ಪೂಜೆಯ ಧಾರ್ಮಿಕ ಧರ್ಮಯಜ್ಞ ಹಾಗೂ ಕೋವಿಡ್ ಹಿನ್ನಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಪಂಚಮ ಮಂಡಲೋತ್ಸವ (48 ದಿನಗಳ ಕಾಲದ ಕಾರ್ಯಕ್ರಮವು ಒಂದು ಮಂಡಲಕ್ಕೆ ಸಮ) ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಅಸಂಖ್ಯ ಅಭಿಮಾನಿ ಭಕ್ತರಿಂದ ಇಂದು ಧರ್ಮದ ಕಾಯಕಗಳು ಸಮಾಜದಲ್ಲಿ ನಿರಂತರವಾಗಿ ಮುನ್ನಡೆದುಕೊಂಡು ಬರುತ್ತಿವೆಯಾದರೂ ಸಹ ಧರ್ಮದ ಬಗೆಗೆ ಅಭಿರುಚಿ ಬೆಳೆಸಿಕೊಳ್ಳಲು ಯುವಜನತೆ ಮುಂದಾಗಬೇಕಿದೆ. ಆಗ ಮಾತ್ರ ಭಾರತೀಯ ಸಂಸ್ಕೃತಿ ಉಳಿದು ಬೆಳೆಯಲು ಕಾರಣವಾಗುತ್ತದೆ ಎಂದರು. ಪುನೀತ, ಗುದ್ಲೇಶ್ವರ, ಪರಮೇಶ್ವರ, ವಿರೇಶ, ದಾನಯ್ಯ, ಮಲ್ಲಿಕಾರ್ಜುನ, ದಾನೇಶ, ಸಚಿನ, ಬಸವರಾಜ ಸೇರಿದಂತೆ ಮತ್ತಿತರ ಶಾಸ್ತ್ರಿಗಳು, ಪಾಠಶಾಲಾ ಒಟುಗಳು ಇದ್ದರು.