ಬೈಲಹೊಂಗಲ

ಸಮಾಜಕ್ಕೆ 2ಎ ಮೀಸಲಾತಿ ದೊರೆಯುವವರೆಗೆ ಹೋರಾಟ

ಸಮಾಜಕ್ಕೆ 2ಎ ಮೀಸಲಾತಿ ದೊರೆಯುವವರೆಗೆ ಹೋರಾಟ
ಬೈಲಹೊಂಗಲ ಚನ್ನಮ್ಮನ ಸಮಾಧಿ ಸ್ಥಳದಲ್ಲಿ ನಡೆದ ಶರಣು, ಶರಣಾರ್ಥಿ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ: ಶರಣು, ಶರಣಾರ್ಥಿ ಕಾರ್ಯಕ್ರಮ

ಬೈಲಹೊಂಗಲ 10: ನಾವು ಯಾವುದೇ ಸಮಾಜದ ಮೀಸಲಾತಿ ಕಸಿದುಕೊಳ್ಳಲು ಹೋರಾಟ ಮಾಡುತ್ತಿಲ್ಲ. ಲಿಂಗಾಯತ ಪಂಚಮಸಾಲಿ ಸಮಾಜದ ಬಡವರ ಸಲುವಾಗಿ ಹೋರಾಟ ಮಾಡುತ್ತಿದ್ದೇವೆ. ಎಲ್ಲಿಯವರೆಗೆ 2ಎ ಮೀಸಲಾತಿ ಸಿಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ಕೈ ಬಿಡುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ವತಿಯಿಂದ ಶುಕ್ರವಾರ ನಡೆದ ಶರಣು, ಶರಣಾರ್ಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,  ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಶಿಕ್ಷಣಕ್ಕಾಗಿ ಹೊರತು ಯಾವುದೇ ರಾಜಕೀಯ ಮೀಸಲಾತಿಗೆ ಅಲ್ಲ. ಇಡೀ ಕರ್ನಾಟಕದ ಇತಿಹಾಸದಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧÀವರು ಸಮಾವೇಶ ಮಾಡಿ ಶಕ್ತಿ ಪ್ರದರ್ಶನ ಮಾಡಿರಲಿಲ್ಲ. ಈ ಹೋರಾಟ ದಿಲ್ಲಿ ಹೈಕಮಾಂಡ್‍ವರೆಗೂ ತಲುಪಿದೆ. ಲಿಂಗಾಯತ ಪಂಚಮಸಾಲಿ ಸಮಾಜ ಕರ್ನಾಟಕದಲ್ಲೂ ಇದೆ ಅಂತ ಗೊತ್ತಾಗಿದೆ. ಉಳಿದ ಎಲ್ಲಾ ಸಮಾಜ ಬಾಂಧÀವರು ತಮ್ಮ, ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಮೀಸಲಾತಿ ಪಡೆಯಲಿ. ನಾವು ವಿರೋಧ ಮಾಡುವುದಿಲ್ಲ. ನಮ್ಮ ಸಮಾಜದ ಮೀಸಲಾತಿಗೆ ಏಕೆ ವಿರೋಧ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. 

ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ನಡೆದ ಪಾದಯಾತ್ರೆ, ಸಮಾವೇಶ ಯಶಸ್ವಿಗೆ ಸಹಕರಿಸಿದ್ದಾಗಿ ರಾಜ್ಯಾದ್ಯಂತ ಶರಣು, ಶರಣಾರ್ಥಿ ಸಂದೇಶ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳು ಸೆ.15ರ ಒಳಗಾಗಿ 2ಎ ಮೀಸಲಾತಿ ನೀಡುವದಾಗಿ ಸಮಾಜಕ್ಕೆ ಭರವಸೆ ಕೊಟ್ಟಿದ್ದಾರೆ ಎಂದರು.

ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸರ್ಕಾರ ಆರು ತಿಂಗಳು ಗಡುವು ಪಡೆದಿದೆ. ಆರು ತಿಂಗಳು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಸರ್ಕಾರ ಮೀಸಲಾತಿ ಘೋಷಣೆ ಮಾಡದೆ ಹೋದರೆ 20 ಲಕ್ಷ ಜನ ಸೇರಿಸಿ ಹೋರಾಟ ನಡೆಸುತ್ತೇವೆ ಎಂದರು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. 

ಮಾಜಿ ಸಚಿವ ಎ.ಬಿ.ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ವಕೀಲ ದಿನೇಶ ಪಾಟೀಲ, ಯುವ ಘಟಕ ಅಧ್ಯಕ್ಷ ರಾಜಶೇಖರ ಮೆನಸಿನಕಾಯಿ, ಜಿ.ಪಂ.ಸದಸ್ಯೆ ವೀಣಾ ಕಾಶಪ್ಪನವರ, ರೋಹಿಣಿ ಪಾಟೀಲ, ಶಂಕರ ಮಾಡಲಗಿ, ತಾಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳನ್ನವರ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಡಿವಾಳಪ್ಪ ಅಂಗಡಿ, ಡಾ.ಬಿ.ಎಸ್.ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ರಾಜಶೇಖರ ಮೂಗಿ ವೇದಿಕೆಯಲ್ಲಿ ಇದ್ದರು. ಎಫ್.ಎಸ್. ಸಿದ್ಧನಗೌಡರ ನಿರೂಪಿಸಿದರು.

ಬಿಳಿ ಕುದುರೆ ಕೊಟ್ಟಾರ ನನಗ. ಅದರ ಮ್ಯಾಗ ಕುಂತು ವಿಧಾನಸೌಧದ ಮೂರನೇ ಮಹಡಿಗೆ ಹೋಗುವುದು ಗ್ಯಾರಂಟಿ. ಮೇ.2ರ ಒಳಗೆ ಉತ್ತರ ಕರ್ನಾಟಕದವರೇ ವಿಧಾನಸೌಧದ ಮೂರನೇ ಮಹಡಿಗೆ ಹೋಗಲಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ


ಸುದ್ದಿ ಓದಿ