ಬಳ್ಳಾರಿ

ಗಾಂಧೀಜಿಯವರ ಆಶಯ ಈಡೇರಿಸಲು ಶ್ರಮಿಸಿ: ಪ್ರೊ.ಸಿದ್ದು ಆಲಗೂರ

ಗಾಂಧೀಜಿಯವರ ಆಶಯ ಈಡೇರಿಸಲು ಶ್ರಮಿಸಿ: ಪ್ರೊ.ಸಿದ್ದು ಆಲಗೂರ

ಬಳ್ಳಾರಿ 02: ಗಾಂಧೀಜಿಯವರ ಆಶಯದಂತೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಗತಿ ಸಾಧಿಸಲು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಯೊಬ್ಬ ಪ್ರಾಧ್ಯಾಪಕರು ಶ್ರಮಿಸಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಹೇಳಿದರು. 

ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರಪಿತ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. 

ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ದೇಶದ ಯುವಕರಿಗೆ ಗಾಂಧೀಜಿಯವರ ಮತ್ತು ಶಾಸ್ತ್ರೀಜಿಯವರ ತತ್ವಾದರ್ಶಗಳ ಬಗ್ಗೆ ಮನವರಿಕೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. 

ಸರಳ, ಮೌಲ್ಯಯುತ ಮತ್ತು ಅರ್ಥಪೂರ್ಣ ಜೀವನ ಸಾಗಿಸಿದ ಮಹನೀಯರ ಜೀವನಗಾಥೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.  

ವಿಶ್ವವಿದ್ಯಾಲಯವನ್ನು ಅಭಿವೃದ್ಧಿಯ ಪಥದತ್ತ ಸಾಗಿಸುವುದು ಎಲ್ಲ ಬೋಧಕರ ಆದ್ಯ ಕರ್ತವ್ಯವಾಗಬೇಕು ಎಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ವಿತ್ತಾಧಿಕಾರಿಗಳಾದ ಡಾ. ಕೆಸಿ ಪ್ರಶಾಂತ್, ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ನಿರ್ದೇಶಕರಾದ ಪ್ರೊ.ಜಿ.ಪಿ ದಿನೇಶ್, ಸಿಂಡಿಕೇಟ್ ಸದಸ್ಯರಾದ ಪ್ರೊ.ಜೀಲನ್,ಡಾ.ಶಶಿಧರ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು. 


ಸುದ್ದಿ ಓದಿ