ಅಥಣಿ

ಕಳ್ಳತನವಾದ ನವಜಾತ ಶಿಶು ಕೆಲವೇ ಘಂಟೆಗಳಲ್ಲಿ ತಾಯಿ ಮಡಿಲಿಗೆ : ಪತ್ರಿಕಾಗೋಷ್ಟಿಯಲ್ಲಿ ಎಸ್‌ಪಿ ಸಂಜೀವ ಪಾಟೀಲ ಶ್ಲಾಘನೆ: ಅಥಣಿ ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ಮೆಚ್ಚುಗೆ

ಕಳ್ಳತನವಾದ ನವಜಾತ ಶಿಶು ಕೆಲವೇ ಘಂಟೆಗಳಲ್ಲಿ ತಾಯಿ ಮಡಿಲಿಗೆ : ಪತ್ರಿಕಾಗೋಷ್ಟಿಯಲ್ಲಿ ಎಸ್‌ಪಿ ಸಂಜೀವ ಪಾಟೀಲ ಶ್ಲಾಘನೆ: ಅಥಣಿ ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ಮೆಚ್ಚುಗೆ

ಲೋಕದರ್ಶನ ವರದಿ 


ಅಥಣಿ 21: ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಮಹಿಳೆಯೋರ್ವಳನ್ನು ಒಂದೇ ಘಂಟೆಯಲ್ಲಿಯೇ ಡಿವೈಎಸ್‌ಪಿ ಶ್ರೀಪಾದ ಜಲದೆ ಹಾಗೂ ಸಿಪಿಐ ರವೀಂದ್ರ ನಾಯ್ಕೋಡಿ ನೇತೃತ್ವದ ಅಥಣಿ ಪೊಲೀಸ್ ತಂಡ ಬಂಧಿಸಿ ನವಜಾತ ಶಿಶುವನ್ನು ತಾಯಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ತಿಳಿಸಿದರು.  

ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.  

    ನರ್ಸ ವೇಶ ಹಾಕಿಕೊಂಡು ಬಾಯಿಗೆ ಮಾಸ್ಕ ಹಾಕಿಕೊಂಡು ಮುಂಜಾನೆ 10.20 ಗಂಟೆಗೆ ಸರಕಾರಿ ಆಸ್ಪತ್ರೆ ಪ್ರವೇಶಿಸಿದ ಆರೋಪಿ ಮಹಿಳೆ ಹೆರಿಗೆ ಆದ ಮಹಿಳೆಯ ಬಳಿ ಬಂದು ನವಜಾತ ಶಿಶುವಿನ ಕುರಿತು ಕೆಲ ಸಂಗತಿಗಳನ್ನು ಕೇಳುವ ನೆಪದಲ್ಲಿ ಮಗುವಿನ ತೂಕ ಮಾಡಿಸಿಕೊಂಡು ಬರುತ್ತೇನೆ ಎಂದು ತಾಯಿ ಅಂಬಿಕಾ ಬೋವಿ ಇವಳಿಂದ ಮಗುವನ್ನು ಪಡೆದು ಕೆಲ ಸಮಯ ಆಸ್ಪತ್ರೆಯಲ್ಲಿ ಸಮಯ ಕಳೆದ ಇವಳು ಹಿಂದಿನ ಬಾಗಿಲಿನಿಂದ ಹೊರಗೆ ಹೋಗಿದ್ದಾಳೆ. ಸಾಕಷ್ಟು ಸಮಯದವರೆಗೂ ಮಗುವನ್ನು ತರದೇ ಇದ್ದಾಗ ಸಂಶಯ ಪಟ್ಟ ತಾಯಿ ಹಾಗೂ ಕುಟುಂಬದ ಇತರೆ ಸದಸ್ಯರು ಆಸ್ಪತ್ರೆಯ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ ಕೆಲ ಸಮಯ ಹುಡುಕಿದರೂ ಸಿಗದೇ ಇದ್ದಾಗ ತಕ್ಷಣ ಪೊಲೀಸ್‌ರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಪ್ರವೃತ್ತರಾದರೆಂದು ತಿಳಿಸಿದರು.  

    ಪೊಲೀಸರು ತಾಯಿಯಿಂದ ಎಲ್ಲ ಮಾಹಿತಿ ಪಡೆದ ಆಸ್ಪತ್ರೆ ಎಲ್ಲ ಸಿಸಿ ಕ್ಯಾಮರಾಗಳನ್ನು ಪರೀಶೀಲಿಸಿ ಆರೋಪಿ ಆಸ್ಪತ್ರೆ ಪ್ರವೇಶಿಸುವುದನ್ನು ಹಾಗೂ ಮಗುವನ್ನು ಎತ್ತಿಕೊಂಡು ಹೋಗುವುದನ್ನು ವೀಕ್ಷಿಸಿ ತಕ್ಷಣ ಖಚಿತ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಮಹಾರಾಷ್ಟ್ರದ ಮಹಿಶಾಳ ಗ್ರಾಮದಲ್ಲಿ ಆರೋಪಿ ಮಹಿಳೆಯನ್ನು ನವಜಾತ ಶಿಶುವಿನೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ ಅವರು ಆರೋಪಿ ಮಹಿಳೆ ಮಾಲಾ ಉರ್ಫ ಐಶ್ವರ್ಯ ಕಾಂಬಳೆ ಎಂದು ಗುರುತಿಸಲಾಗಿದೆ. ಈ ಆರೋಪಿ ಮಹಿಶ್ಯಾಳದ ವ್ಯಕ್ತಿಯ ಜೊತೆಗೆ ಮದುವೆಯಾಗಿದ್ದರೂ ಕೂಡ ಅಥಣಿಯಲ್ಲಿಯೇ ವಾಸವಾಗಿ ಖಾಸಗಿ ಆಸ್ಪತ್ರೆ ಸೇರಿದಂತೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಗೆಗೆ ಮಾಹಿತಿ ಬಂದಿದೆ ಎಂದರು.  

   ನವಜಾತ ಶಿಶು ಕಳ್ಳತನವಾಗಿ ಕೆಲವೇ ಘಂಟೆಗಳಲ್ಲಿಯೇ ಅಥಣಿ ಪೊಲೀಸರು ಆರೋಪಿಯನ್ನು ಬಂಧಿಸಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಪೊಲೀಸ್ ತಂಡದ ಈ ಕಾರ್ಯ ಮೆಚ್ಚಿ 20000 ಸಾವಿರ ರೂ.ಗಳ ಬಹುಮಾನ ಘೋಷಿಸಲಾಗಿದೆ ಎಂದ ಅವರು ಸರಕಾರಿ ಆಸ್ಪತ್ರೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಕೆಲ ಅವಶ್ಯಕ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಕೂಡ ಮಾಡಿದ್ದೇನೆ ಎಂದರು. 


ಸುದ್ದಿ ಓದಿ