ಮಾವಿನ ಎಲೆಗಳ ತೋರಣಕ್ಕೆ ಸ್ಟೆಪ್ಲರ್ ಪಿನ್!
-ಹರ್ಷವರ್ಧನ ಶೀಲವಂತ, ಧಾರವಾಡ
ಶುಭ ಶೋಭನ ಸಮಾರಂಭ, ಹಬ್ಬ-ಹರಿದಿನ ಹಾಗೂ ಮಂಗಲ ಕಾರ್ಯಗಳಿಗೆ ವೈಜ್ಞಾನಿಕ ಹಾಗೂ ಸಂಪ್ರದಾಯದ ಹಿನ್ನೆಲೆ ಕಟ್ಟಲಾಗುವ ಮಾವಿನ ಎಲೆಯ ತೋರಣ ಈಗ ಸಸ್ಯಾಹಾರಿ ಪ್ರಾಣಿಗಳಿಗೆ ಸಂಕಷ್ಟ ತಂದೊಡ್ಡುತ್ತಿದೆ.
ಆಚರಣೆಗಳ ಹಿಂದಿನ ವೈಜ್ಞಾನಿಕತೆ ತಿಳಿಯದ ನಾವು, ಕೇವಲ ಹಿರಿಯರ ಅನುಕರಣೆಗಿಳಿದ ಪರಿಣಾಮವಿದು. ವಿಶೇಷವೆಂದರೆ, ಆಚರಣೆ ಅಡ್ಡ ದಾರಿಯೂ ಹಿಡಿದ, ಸರಳತೆ ಮತ್ತು ಸುಲಭ, ಕಾರ್ಯಸಾಧು ಹೆಸರಿನಲ್ಲಿ ಕಂಡುಕೊಂಡ ದಾರಿ ಪರಿಸರ ಅಸ್ನೇಹಿಯಾಗಿ ಪರಿಣಮಿಸಿದೆ. ನಮ್ಮೊಡನೆ ಸಹಬಾಳ್ವೆ ಮಾಡುವ ಮೂಕ ಪ್ರಾಣಿಗಳ ಪಾಡೇನು? ಬಾಡಿದ ಬಳಿಕ ನಿಮರ್ಾಲ್ಯದ ಅವೈಜ್ಞಾನಿಕ ವಿಲೇವಾರಿಯೂ ಪಕ್ಷಿ-ಪ್ರಾಣಿ ಪ್ರಿಯರಿಗೆ ಕಳವಳ ತಂದೊಡ್ಡುತ್ತಿದೆ. ಬದಲಾಯಿಸುವುದೇ ಹೆಮ್ಮೆಯೇ?!
ಮಾವಿನ ಎಲೆಗಳ ತೋರಣ ಸರಳವಾಗಿ ಕಟ್ಟಲು ಸಾಧ್ಯವಿದ್ದರೂ, ಸ್ಟೆಪ್ಲರ್ ಬಳಸಿ ಪಿನ್ ಹೊಡೆದು ಕಟ್ಟುತ್ತಿರುವ ಬೆಳವಣಿಗೆಗೆ ಏನೆನ್ನುವುದು? ಕೆಲವರು ಒಂದು ಸಣ್ಣ ಪಿನ್ ಹೊಡೆದರೆ, ಮತ್ತೆ ಕೆಲವರು ಎರಡು-ಮೂರು ದೊಡ್ಡ ಗಾತ್ರದ ಸ್ಟೆಪ್ಲರ್ ಪಿನ್ ಹೊಡೆದು ತೋರಣ ಕಟ್ಟುತ್ತಿದ್ದಾರೆ! ಕಟ್ಟಿದ ವಾರದೊಳಗೆ ಬಾಡುವ ಇಂತಹ ತೋರಣ ನೇರವಾಗಿ ತಂದು ಕಸದ ತೊಟ್ಟಿಗೆ ಹಾಕಲಾಗುತ್ತದೆ. ಅಥವಾ ರಸ್ತೆಗೆ ಎಸೆಯಲಾಗುತ್ತದೆ. ಧಾರವಾಡದ ಹಲವು ಬಡಾವಣೆಗಳಲ್ಲಿ ಈ ಸ್ಥಿತಿ ಇದೆ. ಹಿರಿಯರ ಮೇಲುಸ್ತುವಾರಿ ಈ ಕೆಲಸಕ್ಕೆ ಇದ್ದಂತಿಲ್ಲ.
ಮೇಯಲು ಬರುವ ದನ -ಕರುಗಳು ಹಸಿವೆಯ ಪರಿವೆಯಲ್ಲಿ ತಿಂದರೆ ಗತಿ ಏನು? ಕರುಳಿಗೆ ಪಿನ್ ಸಿಕ್ಕು, ಚಿಕಿತ್ಸೆ ಸಿಗುವ ಲವಲೇಶವೂ ಇಲ್ಲದೇ ಒದ್ದಾಡಿ ಸಾಯುವ ಪ್ರಮೇಯ ಸೃಷ್ಟಿಸುತ್ತಿದ್ದೇವೆ. ಆಚರಣೆಗಳು ದೇವರ ಹೆಸರಿನಲ್ಲಿ ಇಷ್ಟು ಅಮಾನವೀಯವಾಗಿರಲು ಹೇಗೆ ಸಾಧ್ಯ? ತಿಳಿದವರಿಗೆ ತಿಳಿಸಿ ಹೇಳಬೇಕಾದ ಇಂತಹ ಪ್ರಮೇಯ ಪರಿಹರಿಸುವುದು ಹೇಗೆ?
ಹಸಿರು ಬಣ್ಣದ ಪ್ಲಾಸ್ಟಿಕ್ ಎಲೆಗೆ ಪಿನ್ ಚುಚ್ಚಿದ ತೋರಣಗಳೂ ಮಾರುಕಟ್ಟೆಯಲ್ಲಿ ಈಗ ಲಭ್ಯ. ವರ್ಷ ಕಳೆಯುವ ವೇಳೆಗೆ ಮತ್ತೆ ಬೀದಿ ಬದಿಗಿನ ಕಸದ ತೊಟ್ಟಿಗೆ ಅಥವಾ ಗಟಾರಿಗೆ ಆಹಾರ! ಕೇವಲ ಪ್ಲಾಸ್ಟಿಕ್ ಬ್ಯಾಗ್ಗಳನ್ನು ನಿಷೇಧಿಸಿದರೆ ಸಾಕೇ? ತಿಳಿದು ನಡೆಯುವ ವಿವೇಕಕಕ್ಕೂ, ತುಳಿದು ನೋಡುವ ಅವಿವೇಕಕ್ಕೂ ವ್ಯತ್ಯಾಸ ಮನಗಾಣುವಂತಾದರೆ.. ಸಹಜೀವಿಗಳ ಬಾಳು ಸಹ್ಯವಾಗಬಹುದು.
ಹೀಗೆ ಮಾಡಬೇಡಿ: ಮಾವಿನ ಎಲೆಯ ತೋರಣಕ್ಕೆ ಗುಂಡು ಸೂಜಿ, ಸ್ಟೆಪ್ಲರ್ ಪಿನ್ ಚುಚ್ಚುವ ಅವಶ್ಯಕತೆ ಏನಿದೆ? ಮೂಕ ಪ್ರಾಣಿ ಬಿಡಿ, ಬಾಯಿ ಕಚ್ಚಿಕೊಳ್ಳದೇ ಇರುವ ಪಿನ್ನು ಸ್ಟೆಪ್ಲರ್ ಬಾಯಿಂದ ತೆರೆದು ಹಾಗೇ ಬಿದ್ದು ಕಾಲಿಗೆ ಚುಚ್ಚಿದರೆ? ಮನೆಯಲ್ಲಿ ಪುಟ್ಟ ಮಕ್ಕಳಿದ್ದು ಆಯ್ದು ಬಾಯಿಗೆ ಹಾಕಿಕೊಂಡರೆ ಏನು ಗತಿ? ಇಂತಹ ಅಯೋಗ್ಯ ಆಚರಣೆಗಳಿಗೆ ಯಾವ ಧರ್ಮ, ಬದುಕಿನ ಮಾರ್ಗವೂ ಮಾನ್ಯತೆ ನೀಡುವುದಿಲ್ಲ. ಆಚರಣೆಯಲ್ಲಿ ವಿವೇಕ ಕಾಣಬೇಕು. ಅವಿವೇಕ ಇಣುಕಬಾರದು.