ಶ್ರೀರಾಮನ ಕುರಿತು ಹೇಳಿಕೆ : ಅಧ್ಯಕ್ಷ ಸ್ಥಾನಕ್ಕೆ ಕುತ್ತು
ಲಖನೌ,ಆಗಸ್ಟ್ 24: ಶ್ರೀರಾಮ ಕಲ್ಪನಾತೀತ ದೇವರು ಎಂದು
ಹೇಳಿಕೆ ನೀಡಿದ್ದ ಉತ್ತರ ಪ್ರದೇಶದ ಹಿಂದುಳಿದ ಸಮುದಾಯ ಘಟಕದ ಅಧ್ಯಕ್ಷ ಲೋಟನ್ ರಾಮ್ ನಿಷಾದ್ ತಮ್ಮ
ಸ್ಥಾನ ಕಳೆದುಕೊಂಡಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಉತ್ತರ ಪ್ರದೇಶದ ಹಿಂದುಳಿದ ಸಮುದಾಯದ ಅಧ್ಯಕ್ಷ ಸ್ಥಾನದಿಂದ ಲೋಟನ್ ರಾಮ್ ನಿಷಾದ್ ಅವರನ್ನು ವಜಾಗೊಳಿಸಿ ಎಂಎಲ್ ಸಿ ರಾಜ್ ಪಾಲ್ ಕಶ್ಯಪ್ ಅವರನ್ನು ನೇಮಕ ಮಾಡಿದ್ದಾರೆ.
ಈ ಕುರಿತು ಸೋಮವಾರ ಪ್ರಕಟಣೆ ಹೊರಡಿಸಿರುವ ಅಖಿಲೇಶ್ ಯಾದವ್, ನೂತನ ಅಧ್ಯಕ್ಷರು ಹದಿನೈದು ದಿನಗಳಲ್ಲಿ ತಮ್ಮ ಹೊಸ ಪದಾಧಿಕಾರಿಗಳನ್ನು ರಚಿಸುವಂತೆ ಸೂಚಿಸಿದ್ದಾರೆ.
ನಿರ್ಗಮಿತ ಅಧ್ಯಕ್ಷ ಲೋಟನ್ ರಾಮ್ ನಿಷಾದ್ ಅವರು ಇತ್ತೀಚೆಗೆ ಭಗವಾನ್ ಶ್ರೀರಾಮ ಕಲ್ಪನಾತೀತ ದೇವರು ಎಂದು ನೀಡಿದ್ದ ಹೇಳಿಕೆ ಪಕ್ಷದ ನಾಯಕತ್ವವನ್ನು ಕೆರಳಿಸಿತ್ತು.