ಕಾರವಾರ

ಜಿಲ್ಲೆಯ ರಸ್ತೆ ಸ್ಥಿತಿ ಸುಧಾರಣೆಗೆ ಸದ್ಯದಲ್ಲೇ ಪಿಡಬ್ಲುಡಿ ಸಚಿವರ ಜೊತೆ ರಾಜ್ಯಮಟ್ಟದಲ್ಲಿ ಸಭೆ : ಗುಡ್ಡ-ಭೂ ಕುಸಿತಕ್ಕೆ ಅಧ್ಯಯನ ತಂಡ - ಸಚಿವ ಶಿವರಾಮ ಹೆಬ್ಬಾರ್

ಜಿಲ್ಲೆಯ ರಸ್ತೆ ಸ್ಥಿತಿ ಸುಧಾರಣೆಗೆ ಸದ್ಯದಲ್ಲೇ ಪಿಡಬ್ಲುಡಿ ಸಚಿವರ ಜೊತೆ ರಾಜ್ಯಮಟ್ಟದಲ್ಲಿ ಸಭೆ :   ಗುಡ್ಡ-ಭೂ ಕುಸಿತಕ್ಕೆ ಅಧ್ಯಯನ ತಂಡ - ಸಚಿವ ಶಿವರಾಮ ಹೆಬ್ಬಾರ್

ಕಾರವಾರ07: ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆ ಪ್ರವಾಹದಿಂದ  700 ಕೋಟಿ ಹಾನಿಯಾಗಿದೆ. ನೆರೆ ಹಾನಿಯ ಮನೆಗಳ ಸಮೀಕ್ಷೆಗೆ ಇನ್ನೂ 20 ದಿನಗಳು ಬೇಕಿವೆ. ಬೆಳೆಹಾನಿ ಸಮೀಕ್ಷೆ, ತೋಟಗಾರಿಕೆ ಬೆಳೆ ಹಾನಿಯ ಸಮೀಕ್ಷೆ ನಡೆದಿದೆ. ಜಿಲ್ಲೆಯಲ್ಲಿ ಕೊಚ್ಚಿ ಹಾಗೂ ಮುಂಬೈ ಸಂಪರ್ಕಿಸುವ ಅರಬೈಲ್ ಘಾಟ್ ರಾಷ್ಟ್ರೀಯ ಹೆದ್ದಾರಿ ಭೂಕುಸಿತ ಕಂಡಿದ್ದು, ಇದು ಒಂದು ಅಚಾನಕ್ ಅಪಘಾತ ಎಂದು  

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.  

 ಪ್ರವಾಹ ಹಾನಿ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅರಬೈಲ್ ಘಾಟ ಪ್ರದೇಶದ 400 ಮೀಟರ್ ಹೆದ್ದಾರಿ ಕುಸಿದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.  ಹಾಗಂತ ಈ ಹೆದ್ದಾರಿಯನ್ನು ನಾವು ಬಳಸದೇ ಇರಲು ಸಾಧ್ಯವಿಲ್ಲ. ಈಗ ಇರುವ ಏಕ ವಾಹನ ಸಂಚಾರದಿಂದ ಭೂ ಕುಸಿತ ಭಾಗದ ಎರಡೂ ಕಡೆಯಿಂದ 35 ಕಿ.ಮೀ ವರೆಗೆ ವಾಹನಗಳ ಸಾಲು ನಿಂತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ದಿನದ 24 ತಾಸು ವಾಹನ ಸಂಚಾರಕ್ಕೆ ಇಂದಿನಿಂದ ಅವಕಾಶ ಕಲ್ಪಿಸಲಾಗುತ್ತಿದೆ. ಭೂ ಕುಸಿತದ ಭಾಗದಲ್ಲಿ ಬೇಕಾದ ಬೆಳಕಿನ ವ್ಯವಸ್ಥೆ ಮಾಡಲು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೂಚಿಸಲಾಗಿದೆ.   ಒಂದು ತಿಂಗಳ ಒಳಗೆ ರಸ್ತೆ ಸೇತುವೆ ಕಾಮಗಾರಿ ಆರಂಭಿಸಲು ಸೂಚನೆ ಸಹ ನೀಡಲಾಗಿದೆ. ಇದಕ್ಕೆ ಬೇಕಾದ ಹಣಕಾಸಿನ ನೆರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಪ್ರವಾಸದ ವೇಳೆ ಕೊಟ್ಟಿದ್ದಾರೆ. 210 ಕೋಟಿ ರೂ. ಹಣ ಜಿಲ್ಲೆಗೆ ಈಗಾಗಲೇ ಬಂದಿದೆ. ಕೇಂದ್ರದಿಂದ ನೆರೆ ಹಾನಿಗೆ ಬರುವ ಅನುದಾನ ತರಲು ಯತ್ನ ನಡೆದಿದೆ ಎಂದರು. 

ಮನೆ ಕಳೆದುಕೊಂಡವರಿಗೆ ಶಾಶ್ವತ ಸ್ಥಳಾಂತರ ಚಿಂತನೆ: 

ಜಿಲ್ಲೆಯಲ್ಲಿ ನೆರೆ ಹಾನಿಯಿಂದ ಮನೆಕಳೆದು ಕೊಂಡವರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಯೋಚಿಸಲಾಗುತ್ತಿದೆ. ಕಳಚೆ, ಶಿರಸಿಯ ಒಂದು ಗ್ರಾಮ ಹಾಗೂ ಕಾರವಾರ ತಾಲೂಕಿನ ನದಿ ದಂಡೆಯ ಗ್ರಾಮಗಳಿಗೆ, ಅಂಕೋಲಾದ ಶಿರೂರು ಮುಂತಾದ ಪ್ರದೇಶಗಳಲ್ಲಿ ಮನೆ ಕಳೆದುಕೊಂಡವರಿಗೆ ಪರ್ಯಾಯ ಭೂಮಿ ನೀಡಲು ಚಿಂತನೆ ನಡೆದಿದೆ. ಕಂದಾಯ ಭೂಮಿ ಹುಡುಕಲು ತಹಶೀಲ್ದಾರರು ಮತ್ತು ಸಹಾಯಕ ಕಮಿಷನರ್‌ಗಳಿಗೆ ಸೂಚಿಸಲಾಗಿದೆ. ನದಿ ದಂಡೆಯ ಜನರು ಪರ್ಯಾಯ ಸ್ಥಳಕ್ಕೆ ಹೋಗಲು ಸಿದ್ದರಿರಬೇಕು ಎಂದರು. ನೆರೆಯಲ್ಲಿ ಜಿಲ್ಲೆಯ 8000 ಮನೆಗಳಿಗೆ ನೀರು ನುಗ್ಗಿದೆ. 21000 ಜನರಿಗೆ ತೊಂದರೆಯಾಗಿದೆ. ಎಲ್ಲರಿಗೂ ಪರಿಹಾರ ನೀಡಲಾಗುವುದು. 2019ರಲ್ಲಿ ಬಂದ ನೆರೆಗೆ ಹಾಗೂ 2021ರಲ್ಲಿ ಬಂದ ನೆರೆಗೆ ಪ್ರತ್ಯೇಕ ಪ್ರತ್ಯೇಕವಾಗಿ ತಲಾ ಹತ್ತು ಸಾವಿರದಂತೆ 20 ಸಾವಿರ ರೂ. ನೀಡಬೇಕಿದೆ. ಇದರಲ್ಲಿ ಗೊಂದಲವಿಲ್ಲ ಎಂದು ಸಚಿವ ಹೆಬ್ಬಾರ ನುಡಿದರು. 

 ಕೊಡಗಿಗೂ ಮಿಗಿಲಾದ ಹಾನಿ : 

ಜಿಲ್ಲೆಯಲ್ಲಿ ಕೊಡಗು ಜಿಲ್ಲೆಗೂ ಹೆಚ್ಚಿನ ಹಾನಿಯಾಗಿದೆ. ಭೂಕುಸಿತ ಸಂಭವಿಸಿದೆ. ಜಿಲ್ಲೆಯಲ್ಲಿ ಎರಡೇ ದಿನದಲ್ಲಿ ನಾಲ್ಕು ಪಟ್ಟು ಮಳೆ ಹೆಚ್ಚು ಬಿದ್ದಿದೆ.  ಜಿಲ್ಲೆಗೆ ಹಿಂದೆಂದಿಗಿಂತ   ಹತ್ತು ಪಟ್ಟು  ಹಾನಿಯಾಗಿದೆ. ಅಣಶಿ,ಅರಬೈಲ್,ಕಳಚೆ ಘಾಟ್ ಗುಡ್ಡ ಕುಸಿದಿವೆ. ಇದನ್ನು ಸರಿಪಡಿಸಲು ತುಂಬಾ ದಿನ ಬೇಕು . ಅನಾಹುತ ಕ್ಕೆ ಕಾರಣ ಹುಡಕಲು ತಜ್ಞರ ನೇಮಕ ಮಾಡಲಾಗಿದೆ.  ಜಿಲ್ಲೆಯ ವಿದ್ಯುತ್ ಉತ್ಪಾದನೆಯ ಅಣೆಕಟ್ಟುಗಳ ಪರಿಣಾಮ ಭೂ ಕುಸಿತವಾಯಿತೋ  ಅಥವಾ ತಳಕೆಬೈಲ್  ಗಣಿಗಾರಿಕೆ ಅಥವಾ ಅತಿಯಾದ ಮಳೆ ಕಾರಣ ಭೂ ಕುಸಿತವಾಯಿತೋ ಎಂದು ಹುಡುಕಲಾಗುವುದು ಎಂದು ಸಚಿವ ಹೆಬ್ಬಾರ್ ಹೇಳಿದರು. ಪರಿಸರ ತಜ್ಞರ ಸಮಿತಿ ನೇಮಿಸಲಾಗಿದೆ. ಅವರ ಅಧ್ಯಯನ ವರದಿ ಸಹ ಗಮನದಲ್ಲಿಡಲಾಗುವುದು. ಇರುವ ಹೆದ್ದಾರಿಯನ್ನು ಬಳಸಲೇ ಬೇಕು. ಅದನ್ನು ಮೊದಲಿನ ಸ್ಥಿತಿಗೆ ತರಲಾಗುವುದು. ಮಳೆ ಕಡಿಮೆಯಾದ ನಂತರ ಕೊಚ್ಚಿಹೋದ ಎಲ್ಲಾ ಸೇತುವೆಗಳ ನಿರ್ಮಾಣಕ್ಕೆ ಕ್ರಮ ಆಗಬೇಕಿದೆ. ಬಹುದೊಡ್ಡ ಮಟ್ಟದಲ್ಲಿ ಜಿಲ್ಲೆಯ ಸಂಪರ್ಕ ವ್ಯವಸ್ಥೆ ಸುಧಾರಿಸಬೇಕಿದೆ. ಅಣಶಿ ಘಟ್ಟದಲ್ಲಿ ಊಹಿಸಲಾಗದಷ್ಟು ಅನಾಹುತವಾಗಿದೆ. ಅಣಶಿ ರಾಜ್ಯ ಹೆದ್ದಾರಿಯನ್ನು ಪುನಃ ಕಟ್ಟುವ ಕೆಲಸ ಆಗಬೇಕಿದೆ ಎಂದರು. 

ಸಂತಾಪ: 

ಇವತ್ತಿನ ಸಭೆಗೆ ಬರುತ್ತಿದ್ದ ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ಕ್ರಿಯಾಶೀಲ ಎಂಜಿನಿಯರ್ ಮುದುಕಣ್ಣನವರ ಅಂಕೋಲಾ ಸಮೀಪ ನಡೆದ ಹೆದ್ದಾರಿ ಅಪಘಾತದಲ್ಲಿ ನಿಧನರಾಗಿದ್ದಾರೆ. ನೇರವಾಗಿದ್ದ ಹೆದ್ದಾರಿಯಲ್ಲಿ ಅಪಘಾತ ನಡೆದುಹೋಗಿದೆ.  ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುವೆ.  ಅವರ ಜೊತೆ ಇದ್ದ ಶಿರಸಿ ಲೋಕಪಯೋಗಿ ಇಲಾಖೆಯ  ಮತ್ತೊಬ್ಬ ಎಂಜಿನಿಯರ್ , ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಇಬ್ಬರು ಕಚೇರಿಯ ನೌಕರರು ಗಾಯಗೊಂಡಿದ್ದು ಅವರನ್ನು ಮಣಿಪಾಲ ಆಸ್ಪತ್ತೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದೇನೆ. ಇಂಥ ಸನ್ನಿವೇಶದಲ್ಲಿ ಪ್ರಗತಿ ಪರೀಶೀಲನೆ ಸಭೆ ನಡೆಸಲು ಮನಸ್ಸು ಬರಲಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ಜಿಲ್ಲೆಗೆ ಆಗಬೇಕಾದ ಕೆಲಸಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದರು. ಅವರ ಜೊತೆ ಶಾಸಕ ದಿನಕರ ಶೆಟ್ಟಿ, ಶಾಂತಾರಂ ಸಿದ್ದಿ, ಶಾಸಕಿ ರೂಪಾಲಿ ನಾಯ್ಕ ಇದ್ದರು. 


ಸುದ್ದಿ ಓದಿ