ಶಿಕ್ಷಣದಲ್ಲಿ ಭಾರತೀಯತೆ, ಸಂಸ್ಕಾರ ಮತ್ತು ರಾಷ್ಟ್ರೀಯತೆಗೆ ಆದ್ಯತೆ ಅಗತ್ಯ
ಲೋಕದರ್ಶನ ವರದಿ
ಗದಗ 21: ಶಿಕ್ಷಣವೆಂದರೆ ಕೇವಲ ಓದು, ಬರಹ, ಲೆಕ್ಕಾಚಾರ ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಲ್ಲ. ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ರಾಷ್ಟ್ರೀಯತೆ, ಸಾಮಾಜಿಕ ಬದ್ಧತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದೂ ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ಎನ್.ದಿನೇಶ್ ಹೆಗಡೆ ಹೇಳಿದರು. ನಗರದ ಕಳಸಾಪುರದ ನಾಗಾವಿ ರಸ್ತೆಯಲ್ಲಿರುವ ಪ್ರಹ್ಲಾದ ಮಹಿಷಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಬುಧವಾರ ನಡೆದ ಸರಸ್ವತಿ ಪೂಜೆ ಹಾಗೂ ಪ್ರವೇಶ ನೋಂದಣಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಮಾರು 29 ವರ್ಷಗಳ ಹಿಂದೆ ಸಣ್ಣ ಸಸಿಯಂತೆ ಆರಂಭವಾದ ರಾಷ್ಟ್ರೋತ್ಥಾನದ ಶಿಕ್ಷಣ ಚಟುವಟಿಕೆ ಇಂದು ಹೆಮ್ಮರವಾಗಿ ಬೆಳೆದಿದೆ. ಆರಂಭದಲ್ಲಿ ಬೆಂಗಳೂರು ಮತ್ತು ಧಾರವಾಡದಲ್ಲಿ ಶಾಲೆಗಳನ್ನು ಪ್ರಾರಂಭಿಸಲಾಗಿತ್ತು. ನಂತರ ಪೋಷಕರು ಹಾಗೂ ಸಮಾಜದಿಂದ ವ್ಯಕ್ತವಾದ ಬೇಡಿಕೆಗೆ ಅನುಗುಣವಾಗಿ ಇತರ ಜಿಲ್ಲೆಗಳಿಗೂ ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸಲಾಯಿತು. ಆರಂಭದಿಂದಲೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವುದರ ಜತೆಗೆ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಶಿಕ್ಷಣದಲ್ಲಿ ಭಾರತೀಯತೆ ಮುಖ್ಯ:
ಇಂದಿನ ಸಂದರ್ಭದಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಅನಿವಾರ್ಯವಾಗುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸುವುದು ಸುಲಭವಲ್ಲ. ಆದರೆ ಆಂಗ್ಲ ಮಾಧ್ಯಮದಲ್ಲಿ ಕಲಿಸುವುದರಿಂದ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಿಂದ ದೂರವಾಗಬೇಕೆಂದಿಲ್ಲ. ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ಪಡೆದರೂ ಭಾರತೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಹೀಗಾಗಿ ಭಾಷೆಯ ಜತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ಮತ್ತು ಶಿಕ್ಷಣದಲ್ಲಿ ಭಾರತೀಯತೆ ಎಂಬುದರ ನಡುವೆ ವ್ಯತ್ಯಾಸವಿದೆ. ಭಾರತೀಯ ಶಿಕ್ಷಣವೆಂದರೆ ಸಾಂಪ್ರದಾಯಿಕ ಗುರುಕುಲ ಪದ್ಧತಿಗೆ ಮಾತ್ರ ಸೀಮಿತವಾಗುವುದಲ್ಲ. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿಯೇ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಾಗಿದೆ. ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಅವರಲ್ಲಿ ದೇಶದ ಬಗ್ಗೆ ಅಭಿಮಾನ ಹಾಗೂ ಸಮಾಜದ ಬಗ್ಗೆ ಕಾಳಜಿ ಬೆಳೆಸಬೇಕು ಎಂದರು.