ಗದಗ ಎಸ್ಎಸ್ಕೆ ಸಮಾಜದಿಂದ ನಗರದಲ್ಲಿ ಅದ್ದೂರಿಯಾಗಿ ಜರುಗಿದ ದಸರಾ ಅಂಬಾರಿ ಮೆರವಣಿಗೆ
ಲೋಕದರ್ಶನ ವರದಿ
ಗದಗ 22 : ಎಸ್ಎಸ್ಕೆ ಸಮಾಜ ಪಂಚ ಕಮೀಟಿ, ತರುಣ ಸಂಘ, ಮಹಿಳಾ ಮಂಡಳ ಹಾಗೂ ಸಮಾಜ ಬಾಂಧವರ ಸಹಕಾರದಿಂದ ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ನಮ್ಮೂರ ದಸರಾ-2026 ಹಬ್ಬದ ಅಂಗವಾಗಿ ದಸರಾ ಅಂಬಾರಿ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು.
ಈ ಮೆರವಣಿಗೆಗೆ ಗದಗ-ಬೆಟಗೇರಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಗಣ್ಯ ಉದ್ಯಮಿಗಳಾದ ಈಶ್ವರಸಾ ಮೆಹರವಾಡೆ ಅವರು ಚಾಲನೆ ನೀಡಿದರು.
ನಂತರ ಗದಗ-ಬೆಟಗೇರಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ದಸರಾ ಕಮೀಟಿ ಚೇರಮನ್ರಾದ ಪ್ರಕಾಶ ಆರ್.ಬಾಕಳೆ ಅವರು ಮಾತನಾಡಿ, ಎಸ್ಎಸ್ಕೆ ಸಮಾಜ ಪಂಚ ಕಮೀಟಿ, ತರುಣ ಸಂಘ, ಮಹಿಳಾ ಮಂಡಳ ಹಾಗೂ ಸಮಾಜ ಬಾಂಧವರ ಸಹಕಾರದಿಂದ ವಿಜಯ ದಶಮಿಯ ಅಂಗವಾಗಿ ರೋಬೋಟೆಕ್ ಆನೆಯ ಮೇಲೆ ಶ್ರೀದೇವಿಯ ಬೆಳ್ಳಿ ಮೂರ್ತಿ ಹೊತ್ತ ಅಂಬಾರಿ ಮೆರವಣಿಗೆ ವಿಶೇಷವಾಗಿದೆ. ನಾಡ ಹಬ್ಬವಾದ ದಸರಾದ ಈ ಸಂದರ್ಭದಲ್ಲಿ ನಾಡಿನಾಧ್ಯಂತ ಉತ್ತಮ ಮಳೆ-ಬೆಳೆಯಾಗಿ ಜನರ ಮತ್ತು ರೈತರ ಸಂಕಷ್ಟಗಳು ದೂರಾಗಲಿ ಎಂದು ನಾಡಿನ ಜನತೆಯ ಪರವಾಗಿ ಜಗನ್ಮಾತೆಯಲ್ಲಿ ಪ್ರಾರ್ಥಿಸಿದರು.
ಎಸ್.ಎಸ್.ಕೆ ಸಮಾಜ ಪಂಚ ಕಮೀಟಿಯ ಗೌರವ ಕಾರ್ಯದರ್ಶಿ ವಿನೋಧ ಶಿದ್ಲಿಂಗ ಅವರು ಮಾತನಾಡಿ, ಎಸ್.ಎಸ್.ಕೆ. ಸಮಾಜ ಬಾಂಧವರ ಸಹಾಯ, ಸಹಕಾರದಿಂದ ಈ ವರ್ಷವು ದಸರಾ ಹಬ್ಬವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗಿದೆ. ಒಂಬತ್ತು ದಿನಗಳವರೆಗೆ ಶೃದ್ದಾ ಭಕ್ತಿಯಿಂದ ನಡೆದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಎಲ್ಲರೂ ನೀಡಿದ ಸಹಕಾರ ಮಖ್ಯವಾಗಿದೆ ಎಂದು ಹೇಳಿದರು.