ಮೊರಾರ್ಜಿ ವಸತಿ ಶಾಲೆಯಲ್ಲಿ ಸಿಬ್ಬಂದಿ ಅಸಹಕಾರ: ಜಿಲ್ಲಾಧಿಕಾರಿಗೆ ಪ್ರಾಚಾರ್ಯರ ದೂರು
ಮುಂಡಗೋಡ, ಜುಲೈ 15: ತಾಲೂಕಿನ ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಬ್ಬಂದಿಯಿಂದ ಅಸಹಕಾರ ಎದುರಾಗುತ್ತಿದೆ ಎಂದು ಆರೋಪಿಸಿ ಶಾಲೆಯ ಪ್ರಾಚಾರ್ಯರು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ದೂರಿನ ಪ್ರಕಾರ, ಶಾಲೆಯ ಕಾವಲುಗಾರರು, ಅಡುಗೆ ಸಿಬ್ಬಂದಿ, ಗ್ರೂಪ್-‘ಡಿ’ ನೌಕರರು ಹಾಗೂ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು ಆಡಳಿತ ಮಂಡಳಿಯೊಂದಿಗೆ ಸಮರ್ಕವಾಗಿ ಸಹಕರಿಸುತ್ತಿಲ್ಲ. ಅಲ್ಲದೆ, ಶಾಲೆಯ ಆಂತರಿಕ ಮಾಹಿತಿಯನ್ನು ಹೊರಗಿನವರಿಗೆ ಸೋರಿಕೆ ಮಾಡುತ್ತಿರುವುದರಿಂದ 350 ವಿದ್ಯಾರ್ಥಿಗಳಿರುವ ಶಾಲೆಯ ಆಡಳಿತ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಪ್ರಾಚಾರ್ಯರು ಆರೋಪಿಸಿದ್ದಾರೆ.
ಪ್ರಸ್ತುತ ಕರ್ತವ್ಯದಲ್ಲಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ಬದಲಿಸಿ ಹೊಸ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಜೊತೆಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲವಾದಲ್ಲಿ ತಮಗೆ ಸೇರಿದಂತೆ ಎಲ್ಲ ಕಾಯಂ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ. ಈ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರಕರಣವನ್ನು ತಕ್ಷಣ ಪರೀಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.