ಭೂಕುಸಿತಗಳಿಂದಾಗಿ ಶ್ರೀನಗರ-ಜಮ್ಮು ಹೆದ್ದಾರಿ ಮತ್ತೆ ಬಂದ್
ಶ್ರೀನಗರ, ಸೆಪ್ಟೆಂಬರ್ 7: ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವ ಋತು ರಸ್ತೆಯಾದ 270 ಕಿ.ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಸೋಮವಾರ ಮಧ್ಯಾಹ್ನ ಮತ್ತೆ ಭೂಕುಸಿತಗಳು ಮತ್ತು ಬಂಡೆಗಳು ಜಾರಿದ್ದರಿಂದ ಮುಚ್ಚಲ್ಪಟ್ಟಿದೆ.
ಈ ಮಧ್ಯೆ, ಐತಿಹಾಸಿಕ 86 ಕಿ.ಮೀ ಉದ್ದದ ಮೊಘಲ್ ರಸ್ತೆ ಮತ್ತು ಲಡಾಖ್ನ ಕೇಂದ್ರಾಡಳಿತ ಪ್ರದೇಶವನ್ನು ಕಾಶ್ಮೀರದೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆಯನ್ನು ಕೇವಲ ಅಗತ್ಯ ವಸ್ತುಗಳು ಮತ್ತು ತಾಜಾ ಹಣ್ಣುಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರ ಅನುಮತಿಸಲಾಗಿದೆ.
ಇಂದು ಬೆಳಿಗ್ಗೆ ಹೆದ್ದಾರಿಯಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಏಕಮುಖ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಯುಎನ್ಐಗೆ ಸೋಮವಾರ ಮಧ್ಯಾಹ್ನ ತಿಳಿಸಿದ್ದಾರೆ.
ಆದರೆ, ಹೊಸದಾಗಿ ಭೂಕುಸಿತಗಳು ಸಂಭವಿಸಿದ್ದರಿಂದ ಹೆದ್ದಾರಿಯಲ್ಲಿ ಸಂಚಾರವನ್ನು ಇಂದು ಮಧ್ಯಾಹ್ನ ಮತ್ತೆ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮತ್ತು ಗಡಿ ರಸ್ತೆ ಸಂಸ್ಥೆ (ಬಿಆರ್ಒ) ಸೇವಾ ಯಂತ್ರಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಎನ್ಎಚ್ಎಐ ಮತ್ತು ಸಂಚಾರಿ ಪೊಲೀಸ್ ಸಿಬ್ಬಂದಿ ಅನುಮತಿಸಿದರೆ ಹೆದ್ದಾರಿಯಲ್ಲಿ ವಾಹನ ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಆಗಿಂದಾಗ್ಗೆ ಭೂಕುಸಿತಗಳು ಮತ್ತು ಬಂಡೆಗಳು ಜಾರಿ ಬೀಳುತ್ತಿರುವುದರಿಂದ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿತ್ತು. ಇಂದು ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಸೇರಿದಂತೆ ವಾಹನಗಳನ್ನು ಜಮ್ಮುವಿನಿಂದ ಶ್ರೀನಗರಕ್ಕೆ ಅನುಮತಿಸಲಾಗಿದೆ. ಆದರೆ, ವಿರುದ್ಧ ದಿಕ್ಕಿನಿಂದ ಯಾವುದೇ ವಾಹನಗಳಿಗೆ ಅನುಮತಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.