ಶಿಗ್ಗಾವ್

ಕ್ರೀಡಾಕೂಟಗಳು ಹಬ್ಬದ ಸಂಭ್ರಮ ಮೂಡಿಸುತ್ತವೆ : ದುಂಡಿಗೌಡ್ರ ಎಸ್‌.ಜಿ.ಎನ್

ಕ್ರೀಡಾಕೂಟಗಳು ಹಬ್ಬದ ಸಂಭ್ರಮ ಮೂಡಿಸುತ್ತವೆ : ದುಂಡಿಗೌಡ್ರ ಎಸ್‌.ಜಿ.ಎನ್

ಶಿಗ್ಗಾವಿ,22:  ವಿದ್ಯಾರ್ಥಿಗಳ ಪಾಲಿಗೆ ಕ್ರೀಡಾಕೂಟಗಳು ಹಬ್ಬದ ಸಂಭ್ರಮ ಮೂಡಿಸುತ್ತವೆ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ. ಗೆಲುವಿಗೆ ಪ್ರಯತ್ನಿಸುವ ಜೊತೆಗೆ ಸೋಲನ್ನೂ ಖುಷಿಯಿಂದ ಅನುಭವಿಸಬೇಕು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅಭಿಪ್ರಾಯ ಪಟ್ಟರು. 

ತಾಲೂಕಿನ ಮುಗಳಿ ಗ್ರಾಮದ ಸರಕಾರಿ ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ ವತಿಯಿಂದ ಜರುಗಿದ ಬನ್ನೂರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಯಲ್ಲಿ ತಮ್ಮ ವಿದ್ಯಾರ್ಥಿಗಳ ಗೆಲುವು ಸಾಧಿಸಲೆಂದು ಶಿಕ್ಷಕರು ಮತ್ತು ಪಾಲಕರು ಹುರಿದುಂಬಿಸುತ್ತಾರೆ. ಗೆಲುವು ಸಾಧಿಸುವ ಮುನ್ನ ಭಾಗವಹಿಸುವುದು ಅಷ್ಟೇ ಮುಖ್ಯ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೆರುಗು ಮೂಡಿಸಿರುವ ಮುಗಳಿ ಗ್ರಾಮದಲ್ಲಿ ಕ್ರೀಡಾಕೂಟ ಉದ್ಘಾಟನೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದರು.   

ಮುಖಂಡ ಶಿವಾನಂದ ರಾಮಗೇರಿ ಮಾತನಾಡಿ ಕ್ರೀಡೆಗಳ ಸ್ಪರ್ಧೆಯಲ್ಲಿ ಸ್ನೇಹಪರವಾಗಿರಲಿ. ದ್ವೇಷ ಅಳಿಸಿ ಸಾಮರಸ್ಯದ ಭಾವನೆಯಿಂದ ಗೆಲುವಿಗೆ ಯತ್ನಿಸಿದರೆ ಊರಿಗೂ ಮತ್ತು ಶಾಲೆಗೂ ಉತ್ತಮ ಹೆಸರು ಬರುತ್ತದೆ ಎಂದರು.   

ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಸಾಧನೆ ಮಾಡಲು ಆರೋಗ್ಯ ಮುಖ್ಯ. ಉತ್ತಮ ಆರೋಗ್ಯಕ್ಕೆ ಕ್ರೀಡೆಯೂ ಮುಖ್ಯ. ನಿರ್ಣಾಯಕರ ನಿರ್ಣಯವನ್ನು ಗೌರವಿಸಿ ಮುನ್ನಡೆಯಿರಿ. ಉತ್ತಮ ಭವಿಷ್ಯ ನಿಶ್ಚಿತ ಎಂದರು.  

ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ ಸಾಳೊಂಕೆ ಮಾತನಾಡಿ ಕ್ರೀಡಾ ಮನೋಭಾವ ಹೊರಹೊಮ್ಮಲು ವೇದಿಕೆ ಅವಶ್ಯ. ಇಂಥ ಅವಕಾಶವನ್ನು ಬಳಸಿಕೊಂಡು ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಜಯ ಸಾಧಿಸುವ ಶ್ರೇಯಸ್ಸು ತಮಗೆ ಒದಗಿ ಬರಲಿ ಎಂದು ಶುಭ ಹಾರೈಸಿದರು.ಶ್ರೀ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್‌ ಕಾರ್ಯದರ್ಶಿ ನಿಂಗಪ್ಪ ಸಕ್ರಿ ಮಾತನಾಡಿದರು.  

ದೈಹಿಕ ಶಿಕ್ಷಕ ಬಿ.ಜಿ.ಕಂಕಣವಾಡ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು.ಮುಖಂಡರಾದ ಫಕ್ಕೀರ​‍್ಪ ಕುಂದೂರ, ಬಸನಗೌಡ ಮೇಲಿನಮನಿ, ತಿಪ್ಪಣ್ಣ ಸಾತಣ್ಣವರ, ಹನುಮರಡ್ಡಿ ನಡುವಿನಮನಿ, ಯಲ್ಲಪ್ಪ ತಳವಾರ, ಗ್ರಾಪಂ ಅಧ್ಯಕ್ಷೆ ಗಿರಿಜವ್ವ ದೊಡ್ಡಮನಿ, ಉಪಾಧ್ಯಕ್ಷೆ ರೇಣುಕಾ ಬಿಶೆಟ್ಟಿ, ಶಾಲಾ ಸುಧಾರಣಾ ಸಮಿತಿ, ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘ, ಗ್ರಾಮದ ಪ್ರಮುಖ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಗಂಜಿಗಟ್ಟಿಯ ಎಂಡಿಆರ್ ಎಸ್ , ಗೊಟಗೋಡಿಯ ಎಸ್‌.ಆರ್‌.ಬೊಮ್ಮಾಯಿ ಪ್ರೌಢಶಾಲೆ, ಹಿರೇಮಣಕಟ್ಟಿ, ಹನುಮರಹಳ್ಳಿ, ಬನ್ನೂರ, ಹಿರೇಮಲ್ಲೂರ ಮತ್ತು ಹಿರೇಬೆಂಡಿಗೇರಿ ಸರಕಾರಿ ಪ್ರೌಢಶಾಲೆ, ಕಬನೂರಿನ ಎಸ್‌.ಜಿ.ಎಫ್‌.ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.ಪ್ರತಿಭಾ ತಿಮ್ಮಾಪುರ ನಿರೂಪಿಸಿದರು. ಈಶ್ವರ ಕಾಲವಾಡ ಸ್ವಾಗತಿಸಿದರು. ಶೀಲಾ ಪಾಟೀಲ ವಂದಿಸಿದರು. 


ಸುದ್ದಿ ಓದಿ