ಕೃಷ್ಣಾ ನದಿ ತೀರದ ರಸ್ತೆಗಳ ಎತ್ತರಿಸಲು ವಿಶೇಷ ಅನುದಾನ: ಶಾಸಕ ಗಣೇಶ ಹುಕ್ಕೇರಿ
ಲೋಕದರ್ಶನ ವರದಿ
ಚಿಕ್ಕೋಡಿ 17: ತಾಲೂಕಿನ ಇಂಗಳಿ ಗ್ರಾಮದ ರಸ್ತೆ ಹಾಗೂ ಸೇತುವೆ ಎತ್ತರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 4.6 ಕೋಟಿ ರೂ ಅನುದಾನ ಮಂಜೂರಾಗಿದ್ದು, ಇದರಿಂದ ನದಿ ಪಾತ್ರದ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ತಾಲೂಕಿನ ಇಂಗಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ವರ್ಷ ಸುರಿಯುವ ಧಾರಾಕಾರ ಮಳೆಗೆ ಕ್ಷೇತ್ರದ ಅನೇಕ ಸೇತುವೆಗಳು ಮುಳುಗಡೆ ಗೊಳ್ಳುತ್ತಿದ್ದವು. ನಾನು ಗ್ರಾಮಕ್ಕೆ ಭೇಟಿ ನೀಡಿದಾಗ ವಾಸ್ತವ ಪರಿಸ್ಥಿತಿಯನ್ನು ಅರಿತು, ಇಂಗಳಿ ಗ್ರಾಮದ ಮಳಗಿ ಭಾಗದ ರೈತರಿಗೆ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ, ಗ್ರಾಮೀಣ ಅಭಿವೃದ್ಧಿ ಇಲಾಖೆ ವತಿಯಿಂದ ಸುಮಾರು 2.5 ಕೋಟಿ ರೂಪಾಯಿಯಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣ ಮಾಡಲಾಗುತ್ತದೆ ಎಂದರು.
ಇಂಗಳಿ ಗ್ರಾಮದಲ್ಲಿನ ಅಂಬೇಡ್ಕರ್ ಸರ್ಕಲ್ ನಿಂದ ಶಿವಾಜಿ ಪುತ್ಥಳಿವರೆಗೆ ಲೊಕೊಪಯೋಗಿ ಇಲಾಖೆ ವತಿಯಿಂದ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಿವುದರ ಜೊತೆಗೆ ಇಂಗಳಿ ಗಾವಠಾಣ ಎಸ್.ಸಿ ಕಾಲೋನಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಅನುದಾನ ಮಂಜೂರು. ಚಿಕ್ಕೋಡಿ- ಸದಲಗಾ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಪ್ರತಿದಿನ ಶ್ರಮಿಸುತ್ತಿದ್ದೆನೆ. ಕೊರೊನಾ ಹಾಗೂ ನೈಸರ್ಗಿಕ ವೈಪರಿತ್ಯದಿಂದ ನಾವು ಅಂದುಕೊಂಡ ವೇಗದಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ಕಳವಳ ಇದೆ ಆದರೆ ಅತಿ ಹೆಚ್ಚು ಪ್ರಯತ್ನ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
ಈ ವೇಳೆ ಲೋಕೊಪಯೋಗಿ ಇಲಾಖೆ ಇಂಜಿನಿಯರ್ ಶಂಕರ್ ಕಾಂಬಳೆ, ಗಣಪತಿ ದಾನವಾಡೆ, ಶಿವಾಜಿ ಪವಾರ್, ಸಂಜಯ ಕೋಳಿ, ರಮೇಶ್ ಮುರಚಿಟ್ಟೆ, ಅಣ್ಣಾಸಾಹೇಬ್ ಸರಡೆ, ಸೇರಿದಂತೆ ಇಂಗಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರಯ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.