ಹೊಸಪೇಟೆ

ಹೊಸಪೇಟೆ ನಗರಸಭೆಯ ವಿಶೇಷ ಸಾಮಾನ್ಯ ಸಭೆ

ಹೊಸಪೇಟೆ ನಗರಸಭೆಯ ವಿಶೇಷ ಸಾಮಾನ್ಯ ಸಭೆ

ಹೊಸಪೇಟೆ(ವಿಜಯನಗರ) 07: ಹೊಸಪೇಟೆಯ ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಬುಧವಾರದಂದು ವಿಶೇಷ ಸಾಮಾನ್ಯ ಸಭೆ ನಡೆಯಿತು. 

ಹೊಸಪೇಟೆಯ ನಗರಸಭೆ ಪೌರಾಯುಕ್ತರಾದ ಮನೋಹರ್ ನಾಗರಾಜ ಅವರು, ಅನುಮೋದನೆಗೊಂಡ ಕಾಮಗಾರಿಗಳ ಕುರಿತು ಮಾಹಿತಿಯನ್ನು ಸಭೆಯಲ್ಲಿ ತಿಳಿಸಿದರು. ನಂತರ ಅನುಮೋದನೆಗೊಂಡ ವಿವಿಧ ಕಾಮಗಾರಿಗಳಿಗೆ ಕರೆಯಲಾದ ಟೆಂಡರ್‌ಗಳಿಗೆ ಕಡಿಮೆ ಮೊತ್ತಕ್ಕೆ ಟೆಂಡರ್ ಸಲ್ಲಿಸಿದವರಿಗೆ ವಿಶೇಷ ಸಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು. 

ನಗರಸಭೆ ಅಧಿಕಾರಿಗಳಿಗೆ ಕಚೇರಿ ಕೆಲಸಗಳ ನಿಮಿತ್ತ ಓಡಾಡಲು ಗುತ್ತಿಗೆ ಆಧಾರದಮೇಲೆ ವಾಹನ ಸರಬರಾಜಿಗೆ ಸಲ್ಲಿಸಿದ ಟೆಂಡರ್‌ಗೆ ಸಭೆಯಲ್ಲಿ ಅನುಮೋದಿಸಲಾಯಿತು.ನಗರಸಭೆಯ ಸದಸ್ಯರೊಬ್ಬರು ಬೀದಿ ನಾಯಿಗಳ ಹಾವಳಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತ ಮನೋಹರ್ ನಾಗರಾಜ ಅವರು, ಇನ್ನೂ ಎರಡು ದಿನಗಳಲ್ಲಿ ನಗರಸಭೆ ನಿಧಿಯಲ್ಲಿ ಬೀದಿ ನಾಯಿಗಳಿಗೆ ಎ.ಬಿ.ಸಿ. ಆ್ಯಕ್ಟ್‌ ಅಡಿಯಲ್ಲಿ ಸಂತಾನ ಹರಣ ಚಿಕಿತ್ಸೆ ಮಾಡಿಸಲಾಗುವುದು ಎಂದರು. 

ನಗರಸಭೆ ಉಪಾಧ್ಯಕ್ಷ ಎಲ್‌.ಆನಂದ್ ಅವರು ಮಾತನಾಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ನಡೆಸಲಾಗುವ ರಾಷ್ಟ್ರ/ರಾಜ್ಯ ಮಟ್ಟದ ಕ್ರೀಡೆ, ಕಲೆ, ಬಾಷಣ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಗಳಿಸಿದವರಿಗೆ ಆಯಾ ವರ್ಷದಲ್ಲಿ ಪ್ರೋತ್ಸಾಹ ನೀಡಲಾಗುತ್ತಿದ್ದು, ಪ್ರೋತ್ಸಾಹಧನಕ್ಕೆ ಅರ್ಜಿಗಳು ಕಡಿಮೆ ಸಲ್ಲಿಕೆಯಾಗಿವೆ. ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಭುನಾಥ, ನಗರಸಭೆ ಸದಸ್ಯರು ಮತ್ತು ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ