ವೆಂಟಿಲೇಟರ ಅಳವಡಿಕೆ ಮಾಡದ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಪ್ರಕಾಶ ಹುಕ್ಕೇರಿ
ಚಿಕ್ಕೋಡಿ27: ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಕೊರೊನಾ ಸೋಂಕಿತರಿಗೆ ವೆಂಟಿಲೇಟರ ಅಳವಡಿಸದಂತೆ ಮೇಲಾಧಿಕಾರಿಗಳ ಆದೇಶಿಸಿದ್ದಾರೆಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ, ಸಂತೋಷ ಕೊನ್ನೂರೆ ಹೇಳಿಕೆಯಿಂದ ಅಸಮಾಧಾನಗೊಂಡ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಜನರ ಜೀವದ ಜೊತೆ ಚೆಲ್ಲಾಟವಾಡಬಾರದೆಂದು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು.ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ ಹಾಗೂ ವಿದ್ಯುತ್ ಜನರೇಟ ಪರಿಶೀಲಿಸಿದ ಬಳಿಕ ಆಸ್ಪತ್ರೆಯ ವೈದ್ಯರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡು, ವೈದ್ಯರು ಜನರ ಜೀವ ಉಳಿಸಬೇಕು ವಿನ: ಜೀವ ತೆಗೆಯಬಾರದು. ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಬಗ್ಗೆ ನಮ್ಮ ಗಮನಕ್ಕೆ ತರಬೇಕೆಂದು ಸೂಚಿಸಿದರು.
ಚಿಕ್ಕೋಡಿ ಭಾಗದಲ್ಲಿ ಅತೀ ದೊಡ್ಡ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯ ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆಸ್ಪತ್ರೆಯ ಅಧಿಕಾರಿಗಳು ನಮ್ಮ ಗಮನಕ್ಕೆ ತಂದರೇ ಮೂಲಭೂತ ಸೌಲಭ್ಯ ಒದಗಿಸುತ್ತೇವೆ. ಅದನ್ನು ಬಿಟ್ಟು ಸುಮ್ಮನ್ನೇ ಕುಳಿತರೇ ಏನು ಪ್ರಯೋಜನ, ಬೇಸಿಗೆಯಲ್ಲಿ ಮಳೆ ಗಾಳಿಗೆ ವಿದ್ಯುತ್ ಕೈ ಕೊಡುತ್ತವೆ. ಮುಂಜಾಗೃತವಾಗಿ ಜನರೇಟರ ಹೇಗೆ ಇದೆ ಎಂಬುದು ಗಮನಿಸುವುದು ಆಸ್ಪತ್ರೆಯ ಅಧಿಕಾರಿಗಳ ಕರ್ತವ್ಯ. ಆದರೆ ನಿನ್ನೆಯ ದಿನ ಮೂರು ಗಂಟೆ ವಿದ್ಯುತ್ ಕಡಿತವಾಗಿ ಸೋಂಕಿತರು ಪರದಾಡಿದ್ದಾರೆ. ಇದಕ್ಕೆ ಯಾರು ಜವಾಬ್ದಾರರು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ರಮೇಶ ನಾಯಿಕ ಅವರನ್ನು ಪ್ರಕಾಶ ಹುಕ್ಕೇರಿ ತೀವ್ರ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯಲ್ಲಿ ವೆಂಟಿಲೇಟರ ಅಳವಡಿಕೆ ಯಾಕೆ ಮಾಡಿಲ್ಲವೆಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ ಕೊನ್ನೂರೆ ಅವರನ್ನು ಕೇಳಿದಾಗ ವೆಂಟಿಲೇಟರ ಅಳವಡಿಕೆಯಿಂದ ಆಕ್ಸಿಜನ್ ಹೆಚ್ಚು ಬೇಕಾಗುತ್ತಿದೆ. ಹೀಗಾಗಿ ವೆಂಟಿಲೇಟರ ಅಳವಡಿಕೆ ಬೇಡವೆಂದು ಮೇಲಾಧಿಕಾರಿಗಳ ಆದೇಶದ ಮೇರಿಗೆ ಬಂದ ಮಾಡಿದ್ದಾರೆ. ಇದರಿಂದ ಕೊರೊನಾ ಸೋಂಕಿರಿಗೆ ಸಮಸ್ಯೆ ಆಗುತ್ತಿದೆ. ಎಷ್ಟು ಆಕ್ಸಿಜನ್ ಅವಶ್ಯಕ ಇದಯೋ ಅಷ್ಟು ಆಕ್ಸಿಜನ್ ಪೂರೈಕೆ ಮಾಡುತ್ತೇವೆ ಕೂಡಲೇ ವೆಂಟಿಲೇಟರ ಆರಂಭಿಸಬೇಕು ಎಂದು ಪ್ರಕಾಶ ಹುಕ್ಕೇರಿ ಸೂಚಿಸಿದರು.ಚಿಕ್ಕೋಡಿ: ಸಾರ್ವಜನಿಕ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಮಾಜಿ ಸಂಸದ ಪ್ರಕಾಶ ಹುಕ್ಕೇರಿ