ಮನರಂಜನೆ

ಶೀಘ್ರದಲ್ಲೇ ಡಾ. ಅಂಬರೀಶ್ ಫೌಂಡೇಷನ್ ಸ್ಥಾಪನೆ : ಸುಮಲತಾ ಅಂಬರೀಶ್

ಶೀಘ್ರದಲ್ಲೇ ಡಾ. ಅಂಬರೀಶ್ ಫೌಂಡೇಷನ್ ಸ್ಥಾಪನೆ : ಸುಮಲತಾ ಅಂಬರೀಶ್

ಬೆಂಗಳೂರು, ನ. 24: ಚಂದನವನದ ಹಿರಿಯ ನಟ, ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಕೊಡುಗೈ ದಾನಿ. ತಮ್ಮ ಜೀವಿತಾವಧಿಯಲ್ಲಿ ಅಗತ್ಯವುಳ್ಳವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ.  ಅವರು ಅನುಸರಿಸುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲು ನಟಿ, ಸಂಸದೆ ಸುಮಲತಾ ಅಂಬರೀಶ್ ನಿರ್ಧರಿಸಿದ್ದಾರೆ. 

ಅಂಬಿ ಮೂರನೇ ವರ್ಷದ ಪುಣ್ಯಸ್ಮರಣೆಯಾದ ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸಮಾಧಿಗೆ ಪುತ್ರ ಅಭಿಷೇಕ್ ಜೊತೆ ಪೂಜೆ ಸಲ್ಲಿಸಿದ ಸುಮಲತಾ, ಅಂಬಿಯ ಹಲವು ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಟ್ರಸ್ಟ್ ಸ್ಥಾಪಿಸುವುದಾಗಿ ಹೇಳಿದರು.  

ಅಂಬರೀಶ್ ನಮ್ಮೆಲ್ಲರಿಗೂ ಶಕ್ತಿ, ಸ್ಫೂರ್ತಿ.  ಬಡವರಿಗೆ, ಕಲಾವಿದರಿಗೆ ಸಹಾಯ ನೀಡುತ್ತಿದ್ದರು.  ಅವರು ಮಾಡಿದ ಎಷ್ಟೋ ಕೆಲಸಗಳು ಜನರ ಗಮನಕ್ಕೆ ಬಂದಿಲ್ಲ.  ಹೀಗಾಗಿ ಫೌಂಡೇಷನ್ ಮೂಲಕ ಗ್ರಾಮೀಣ ಭಾಗದ ಕಲಾವಿದರಿಗೆ, ವಿದ್ಯಾರ್ಥಿಗಳಿಗೆ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಪ್ರತಿಭಾವಂತರಿಗೆ ಸಹಾಯ ಸಿಗಲಿದೆ.  ಆರೋಗ್ಯ, ಶಿಕ್ಷಣ, ಕ್ರೀಡೆ ಮತ್ತಿತರ ಕ್ಷೇತ್ರಗಳಿಗೂ ಸಹಾಯ ನೀಡುವ ಆಲೋಚನೆಯಿದೆ ಎಂದು ತಿಳಿಸಿದರು.

-:ಹೋರಾಟದ ಸಮಯ ಇದಲ್ಲ:- 

ಅಭಿಮಾನಿಗಳಿಗೆ ಈ ಬಗ್ಗೆ ನೋವಿದೆ. ಅದಕ್ಕೆ ಹೋರಾಟ ಮಾಡ್ತೀವಿ ಅಂತಿದ್ದಾರೆ. ಆದರೆ ಹೋರಾಟದ ಸಮಯ ಇದಲ್ಲ ಎಂದು ಹೇಳಿದ್ದೀನಿ. ಅಪ್ಪು ಅಗಲಿಕೆಯ ನೋವು ಎಲ್ಲರನ್ನೂ ಕಾಡಿದೆ. ಈ ಸಮಯದಲ್ಲಿ ಹೋರಾಟ ಮಾಡಬಾರದು ಎಂದಿದ್ದೇನೆ ಎಂದು ತಿಳಿಸಿದರು.  

ಅಂಬರೀಶ್ ಅವರು ಯಾವ ಪ್ರಶಸ್ತಿ, ಹೆಸರನ್ನು ಕೇಳಿ ಪಡೆದಿರಲಿಲ್ಲ. ನಾವೂ ಸಹ ಅಂಬರೀಶ್ ಅವರಿಗೆ ಪ್ರಶಸ್ತಿ ಕೊಡಿ, ಅದು ಮಾಡಿ, ಇದು ಮಾಡಿ ಎಂದು ಕೇಳಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಂಬಿ ತುಂಬಾ ಒಳ್ಳೇಯ ಸ್ನೇಹಿತರಾಗಿದ್ದರು. ಈಗ ಅವರೇ ಸಿಎಂ ಆಗಿರೋದ್ರಿಂದ ಮಾಡ್ತಾರೆ ಅನ್ನೋ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.   

ಅಂಬರೀಶ್ ಇಲ್ಲವಾಗಿ 3 ವರ್ಷವಾಗಿದೆ. ಅವರ ಹೆಸರಲ್ಲಿ ಏನೂ ಮಾಡಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ. ಸ್ಮಾರಕ ಸೇರಿ ಎಲ್ಲೂ ಅಂಬರೀಶ್ ಅವರ ಹೆಸರು ಕೇಳಿಬಂದಿಲ್ಲ ಎಂದು ಅಭಿಮಾನಿಗಳ ಬೇಸರದ ಬಗ್ಗೆ ಹೇಳುತ್ತಾ, ಅಂಬರೀಶ್ ಯಾವಾಗಲೂ ಪ್ರಶಸ್ತಿ, ಬಿರುದು, ಬಾವಲಿ, ಸ್ಥಾನಮಾನಗಳನ್ನು ಕೇಳಿ ಪಡೆದವರಲ್ಲ.  ಅಂತಹ ಸ್ವಾಭಿಮಾನ ತುಂಬಿದ ವ್ಯಕ್ತಿತ್ವ ಹೊಂದಿದ್ದರು.  ಅವರ ಅಭಿಮಾನಿಗಳೂ ಸಹ ಅಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿ ಓದಿ