ಬೈಲಹೊಂಗಲ

ಸರಳವಾಗಿ ಕ್ಷೇತ್ರಸೊಗಲ ಸೋಮೇಶ್ವರ ಜಾತ್ರಾ ಮಹೋತ್ಸವ

ಸರಳವಾಗಿ ಕ್ಷೇತ್ರಸೊಗಲ ಸೋಮೇಶ್ವರ ಜಾತ್ರಾ ಮಹೋತ್ಸವ
ಬೈಲಹೊಂಗಲ : ಸಮೀಪದ ದಕ್ಷಿಣದ ಕಾಶಿ ಶ್ರೀಕ್ಷೇತ್ರಸೊಗಲ ಸೋಮೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ವಿವಿಧ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದವು.  ಸೋಮೇಶ್ವರ ಹಾಗೂ ಶಿವ-ಪಾರ್ವತಿಯರ ದೇವಸ್ಥಾನದಲ್ಲಿ ಬೆಳಗ್ಗೆ ಬುತ್ತಿ ಪೂಜೆ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಮೂರ್ತಿ ಪೂಜೆ, ಪ್ರಾರ್ಥನೆ, ಪುಷ್ಪಾರ್ಚನೆ, ದೇವಸ್ಥಾನದಲ್ಲಿ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಎಲೆಗಳಿಂದ ಸೋಮೇಶ್ವರನ, ಪಾರ್ವತಿ-ಪರಮೇಶ್ವರನ ಗದ್ದುಗೆಯನ್ನು ಶೃಂಗರಿಸಲಾಗಿತ್ತು. ಮಹಾಮಂತ್ರಗಳಿಂದ ಭಜನೆ, ನಂತರ ಮಿಡಕನಟ್ಟಿ ಹಾಲಸಿದ್ದೇಶ್ವರ, ಬೆನಕಟ್ಟಿಯ ದುರ್ಗಾದೇವಿ, ಹೊಸೂರಿನಿಂದ ಆಗಮಿಸಿದ ಸೋಮೇಶ್ವರರ ಪಲ್ಲಕ್ಕಿ ಉತ್ಸವ ಜರುಗಿತು. ಮಂಗಳವಾರ ಸಾಯಂಕಾಲ ಕೆದಿಗೆ, ಸೇವಂತಿಗೆ, ಮಲ್ಲಿಗೆ, ಗುಲಾಬಿ, ಕನಕಾಂಬರ ವಿವಿಧ ಹೂವುಗಳಿಂದ, ಬಾಳೆ ಎಲೆ, ಕಬ್ಬು, ತೆಂಗಿನ ಗರಿಗಳಿಂದ ಅಲಂಕರಿಸಿದ ರಥದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.ಹೊಸೂರ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಬೈಲಹೊಂಗಲದ ಪ್ರಭುನೀಲಕಂಠ ಸ್ವಾಮೀಜಿ ಸೋಮೇಶ್ವರ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. 
 ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದರು. ಮಲ್ಲೂರ ಪುರವಂತರ ಒಡಪು, ನಂದಿಕೋಲು, ವಿವಿಧ ವಾದ್ಯ ಮೇಳಗಳಿಂದ ರಥ ಮುಂದೆ ಸಾಗಿದಾಗ ಭಕ್ತರು ‘ಹರ ಹರ ಮಹಾದೇವ’ ಎನ್ನುತ್ತ ರಥವನ್ನು ಭಕ್ತಿಯಿಂದ ನಮಿಸಿ, ಮುಂದೆ ಎಳೆದರು. ಸೋಮೇಶ್ವರ ಟ್ರಸ್ ಅಧ್ಯಕ್ಷರು, ಟ್ರಸ್ಟ್ ನಿರ್ದೇಶಕರು, ಅರ್ಚಕರಾದ ನಿಂಗಯ್ಯ ಪೂಜೇರಿ, ಗುರುಸ್ವಾಮಿ ಹೊಸಪೇಟಿಮಠ ಹಾಗೂ ಜಾತ್ರಾ ಕಮೀಟಿಯ ಸರ್ವ ಸದಸ್ಯರು ಇದ್ದರು.
ಶ್ರಾವಣ ಮಾಸದ ಕೊನೆಯ ದಿನ ಶಿವ-ಪಾರ್ವತಿಯರ ನಿಶ್ಚಿತಾರ್ಥವು ಕಲ್ಯಾಣ ಮಂಟಪದಲ್ಲಿ ಬೈಲವಾಡ ಗ್ರಾಮದ ಮದ್ನಳ್ಳಿ ಕುಟುಂಬದ ವಧುವಾಗಿ ಪಾರ್ವತಿ, ಬೈಲಹೊಂಗಲದ ಹೂಲಿ ಕುಟುಂಬದ ವರನಾಗಿ ಶಿವನ ಜತೆ ನಿಶ್ಚಿತಾರ್ಥ ನೆರವೇರಿಸಿರುತ್ತಾರೆ. ಜಾತ್ರೆಯ ನಿಮಿತ್ಯವಾಗಿ ಸೋಮವಾರ ರಾತ್ರಿ ಶಿವ-ಪಾರ್ವತಿಯರÀ ಅಕ್ಷತಾರೋಪಣ ಜರುಗಿತು. ಅಕ್ಷತರೋಪಣ ಮುಂಚೆ ಮದುವೆಯಾಗದ ಯುವತಿಯರು, ಯುವಕರು ಕ್ಷೇತ್ರದ ದೇವಸ್ಥಾನದಲ್ಲಿ ಕಂಕಣ ಕಟ್ಟಿಸಿಕೊಂಡರೆ ಮದುವೆಯಾಗುತ್ತದೆ ಎಂಬ ಪ್ರತೀತಿ ಇರುವ ಕಾರಣ ನೂರಾರು ಯುವತಿಯರು, ಯುವಕರು ಜಲಧಾರೆಯಲ್ಲಿ ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಕಂಕಣ ಕಟ್ಟಿಸಿಕೊಂಡರು. ಕಳೆದ ವರ್ಷ ಕಂಕಣ ಕಟ್ಟಿಸಿಕೊಂಡ ವಿವಾಹವಾದ ನವ ಜೋಡಿಗಳು ದೇವಸ್ಥಾನಕ್ಕೆ ಆಗಮಿಸಿ ಹರಕೆ ತೀರಿಸಿದರು. 

ಸುದ್ದಿ ಓದಿ