ಸೌಂದತ್ತಿ

ಸಮಾಜವು ಮಠ ಮಾನ್ಯಗಳಿಗೆ ಗೌರವ ನೀಡಬೇಕಿದೆ: ವಿರುಪಾಕ್ಷಶ್ರೀ

ಸಮಾಜವು ಮಠ ಮಾನ್ಯಗಳಿಗೆ ಗೌರವ ನೀಡಬೇಕಿದೆ: ವಿರುಪಾಕ್ಷಶ್ರೀ

21400 ಮಠಗಳಲ್ಲಿ ಕೇವಲ 3ಸಾವಿರ ಮಠಗಳು ಮಾತ್ರ ಉಳಿದಿದ್ದು, 18ಸಾವಿರ ಮಠಗಳು ಕಡಿಮೆ 

ಸವದತ್ತಿ 10: ಸಮಾಜವು ಮಠ ಮಾನ್ಯಗಳ ಬಗ್ಗೆ ಗೌರವ ನೀಡಬೇಕಿದ್ದು, ಮಠಗಳು ಉಳಿದರೆ ಮಾತ್ರ ಸಮಾಜದ ವ್ಯವಸ್ಥೆ ಸರಿಯಾಗಿರಲು ಸಾಧ್ಯ. ಇತ್ತೀಚಿನ 115 ವರ್ಷಗಳ ಅವಧಿಯಲ್ಲಿ 18ಸಾವಿರ ಮಠಗಳು ಕಡಿಮೆಯಾಗಿರುವುದು ವಿಷಾದದ ಸಂಗತಿ ಎಂದು ಉಪ್ಪಿನ ಬೆಟಗೇರಿಯ ವಿರುಪಾಕ್ಷ ಮಹಾಸ್ವಾಮೀಜಿ ಹೇಳಿದರು. 

ಪಟ್ಟಣದ ಕಲ್ಮಠದ ಆವರಣದಲ್ಲಿ ಸದ್ಭಕ್ತರಿಂದ ಹಮ್ಮಿಕೊಂಡ ಕಲ್ಮಠದ ಲಿಂ. ಶಿವಲಿಂಗ ಮಹಾಸ್ವಾಮೀಜಿಯವರ ಭಾವಪೂರ್ಣ ನುಡಿ ನೈವೇದ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಸಮಾಜ ತನ್ನ ಕರ್ತವ್ಯವವನ್ನು ಮರೆಯುತ್ತಿರುವದರಿಂದ ಮಠ ಮಾನ್ಯಗಳ ಸಂಖ್ಯೆಗಳು ಕಡಿಮೆಯಾಗುತ್ತಿವೆ. 1908ರಲ್ಲಿ 21400 ಮಠಗಳಿರುವದನ್ನು ನಾವು ಕಾಣಬಹುದಾಗಿದ್ದು, ಈಗ ಕೇವಲ 3ಸಾವಿರ ಮಠಗಳು ಮಾತ್ರ ಉಳಿದುಕೊಂಡಿವೆ ಎಂದರು. ಮಠ ಮಾನ್ಯಗಳು ಸಮಾಜಕ್ಕೆ ಉತ್ತಮ ಸಂಸ್ಕೃತಿಯ ಜೊತೆಗೆ ಅಕ್ಷರದಾಸೋಹ, ಅನ್ನದಾಸೋಹವನ್ನು ನೀಡುತ್ತಾ ಬಂದಿದ್ದು, ಮಠಗಳ ರಕ್ಷಣೆಯ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.  

ಕಲ್ಮಠದ ಲಿಂಗೈಕ್ಯ ಶಿವಲಿಂಗ ಮಹಾಸ್ವಾಮೀಜಿಯವರು ಎಲ್ಲ ಸಮಾಜ ಬಾಂಧವರೊಂದಿಗೆ ಉತ್ತಮ ಬಾಂಧವ್ಯವ ಹೊಂದಿದ್ದರು. ಶ್ರೀಮಠದಲ್ಲಿ ಈ ಹಿಂದೆ ನಡೆದುಕೊಂಡು ಬಂದಿರುವಂತ ಎಲ್ಲ ಧಾರ್ಮಿಕ ಆಚರಣೆಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವಂತ ಕಾರ್ಯ ವ್ಯವಸ್ಥಿತವಾಗಿ ನಡೆದುಕೊಂಡು ಹೋಗಬೇಕಿದೆ ಎಂದರು. 

ಮುನವಳ್ಳಿಯ ಮುರಘೇಂದ್ರ ಸ್ವಾಮೀಜಿ ಮಾತನಾಡಿ, ಶಿವಲಿಂಗ ಮಹಾಸ್ವಾಮೀಜಿಯವರು ಲಿಂಗೈಕ್ಯರಾದ ನಂತರ ಅವರ ಉತ್ತರಾಧಿಕಾರಿಗಳಾಗಿ ಬಸವಲಿಂಗ ದೇವರನ್ನು ಮರಿದೇವರನ್ನಾಗಿ ನೇಮಕ ಮಾಡಲಾಗಿದ್ದು, ಅವರನ್ನು ಶಿಕ್ಷಣಕ್ಕಾಗಿ ಶಿವಯೋಗ ಮಂದಿರಕ್ಕೆ ಕಳಿಸುವಂತ ವ್ಯವಸ್ಥೆಯನ್ನು ಎಲ್ಲ ಮಠಾಧೀಶರು ಸೇರಿ ಮಾಡಬೇಕಿದೆ ಎಂದರು.  

ಗಚ್ಚಿನಮಠ ಕಿಲ್ಲಾತೊರಗಲ್ಲದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೈಲಹೊಂಗಲ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ  ಮಾತನಾಡಿ, ಸರಳ ಸಜ್ಜನಿಕೆ ವ್ಯಕ್ತಿತ್ವವನ್ನು ಹೊಂದಿದ್ದ ಲಿಂ. ಶಿವಲಿಂಗ ಮಹಾಸ್ವಾಮೀಜಿಯವರ ನಡೆ ನುಡಿಗಳನ್ನು ನಾವು ಅನುಸರಿಸಿಕೊಂಡು ಹೋಗಬೇಕಿದೆ. ಕಲ್ಮಠಕ್ಕೆ ಅವರು ಮಾಡಿದಂತ ಸೇವೆ ಅನನ್ಯವಾಗಿದ್ದು, ಅವರು ಮಾಡಿಕೊಂಡು ಬಂದಂತ ಕಾರ್ಯಗಳನ್ನು ನಾವೆಲ್ಲಾ ಮುಂದುವರೆಸಿಕೊಂಡು ಹೋಗೋಣ ಎಂದರು. 

ಶ್ರೀಕಲ್ಮಠ ಬಿದರಿ ಹಾಗೂ ಸವದತ್ತಿ ಮತ್ತು ಗುಲಗಾಲಜಂಬಗಿ ಮಠಗಳಿಗೆ ಮರಿದೇವರಾಗಿ ನೇಮಕಗೊಂಡ ಬಸವಲಿಂಗ ದೇವರಿಗೆ ಎಲ್ಲ ಶ್ರೀಗಳು ಪುಷ್ಪಾರ್ಚನೆಯ ಆಶೀರ್ವಾದ ಮಾಡಿದರು.  

ಮುರಗೋಡದ ನೀಲಕಂಠ ಸ್ವಾಮೀಜಿ, ಇನಾಂಹೊಂಗಲದ ಸಿದ್ದಲಿಂಗ ಮಹಾಸ್ವಾಮೀಜಿ, ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹೂಲಿಯ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಶಾಂತವೀರ ಸ್ವಾಮೀಜಿ, ಅಜ್ಜಯ್ಯಸ್ವಾಮೀಜಿ, ದಂಡಪಾಣಿ ದೀಕ್ಷಿತರು, ನರಗುಂದ ಪತ್ರಿವನದ ಸ್ವಾಮೀಜಿ, ನಾಗಲಿಂಗ ಸ್ವಾಮೀಜಿ ಹಾಗೂ ನಾಡಿನ ಅನೇಕ ಶ್ರೀಗಳು ಆಗಮಿಸಿ ಸಾನ್ನಿಧ್ಯವಹಿಸಿದ್ದರು. 

ಗಣ್ಯರಾದ ವಿರುಪಾಕ್ಷ ಮಾಮನಿ, ಐ.ಪಿ.ಪಾಟೀಲ, ವಿಶ್ವಾಸ ವೈದ್ಯ, ಸೌರಭ ಚೋಪ್ರಾ, ಆನಂದ ಜಾನವೇಕರ, ಡಾ.ಎನ್‌.ಸಿ.ಬೆಂಡಿಗೇರಿ, ಅಯ್ಯಪ್ಪ ಹಿರೇಮಠ ಸೇರಿದಂತೆ ಅನೇಕ ಭಕ್ತರು ನುಡಿ ನೈವೇದ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ