ಸಮಾಜಪರ ಕಾರ್ಯದಿಂದ ಜೀವನ ಸಾರ್ಥಕ: ಪಂಚಾಕ್ಷರಿ
ಬೈಲಹೊಂಗಲ 20: ಹುಟ್ಟು ಆಕಸ್ಮಿಕವಾದರೂ ಸಾವು ಖಚಿತ ಇದರ ಮಧ್ಯದಲ್ಲಿ ಸಮಾಜಕ್ಕಾಗಿ ಪುಣ್ಯಕಾರ್ಯ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಯಕ್ಕುಂಡಿ ವಿರಕ್ತಮಠದ ಪಂಚಾಕ್ಷರಿ ಸ್ವಾಮಿಜಿ ಹೇಳಿದರು.
ಶುಕ್ರವಾರ ಸಮೀಪದ ಯಕ್ಕುಂಡಿ ವೀರಕ್ತಮಠದಲ್ಲಿರುವ ಅನಾಥ ಮಕ್ಕಳ ಜೊತೆ ಹಮ್ಮಿಕೊಂಡಿದ್ದ ನ್ಯಾಯವಾದಿ ಎಫ್. ಎಸ್. ಸಿದ್ದನಗೌಡರ ಜನ್ಮದಿನಾಚರಣೆ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಭಾರತದ ಸನಾತನ ಸಂಸ್ಕೃತಿ ಬಹಳಷ್ಟು ಹಿರಿಮೆ ಗರಿಮೆಗಳಿಂದ ಬಂದಿದೆ ಆದರೆ ಇಂದಿನ ದಿನಗಳಲ್ಲಿ ಯುವಸಮುದಾಯ ತಮ್ಮ ಜನ್ಮದಿನಾಚರಣೆಯನ್ನು ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗಿ ಮೋಜು ಮಸ್ತಿ ಮಾಡುತ್ತಿರುವುದು ದುರಾದೃಷ್ಟಕರ ಆದರೆ ನ್ಯಾಯವಾದಿಗಳಾಗಿ ರಾಜಕೀಯ ಯುವನಾಯಕರಾಗಿ ಪ್ರತಿವರ್ಷ ತಮ್ಮ ಜನ್ಮದಿನಾಚರಣೆಯನ್ನು ಅತ್ಯಂತ ಸರಳವಾಗಿ ಅನಾಥ ಮಕ್ಕಳ ಜೊತೆ ಆಚರಿಸುತ್ತಿರುವ ಸಿದ್ದನಗೌಡರ ಕಾರ್ಯ ಶ್ಲಾಘನೀಯ ಎಂದರು.
ನ್ಯಾಯವಾದಿ ಎಫ್ ಎಫ್ ಸಿದ್ದನಗೌಡ ಮಾತನಾಡಿ, ಈ ಭಾಗದಲ್ಲಿ ಹಿಂದೂ-ಮುಸ್ಲಿಂ ಜನಾಂಗದ ಜನತೆಯನ್ನು ಒಗ್ಗೂಡಿಸಿ ಜಾತಿ-ಮತ ಪಂತ ಎನ್ನದೆ ಸಾಮರಸ್ಯದ ಜೀವನದ ಜೊತೆಗೆ ಸಮಾಜದಲ್ಲಿ ತಂದೆ ತಾಯಿ ಪಾಲಕರಿಲ್ಲದ ಅನೇಕ ಮಕ್ಕಳಿಗೆ ಆಶ್ರಯವನ್ನು ನೀಡಿ ವಿದ್ಯಾದಾನ ಮಾಡುತ್ತಿರುವ ಯಕ್ಕುಂಡಿ ವಿರಕ್ತಮಠದ ಪೂಜ್ಯರ ಕಾರ್ಯ ನಾಡಿಗೆ ಮಾರ್ಗದರ್ಶನವಾಗಿದೆ. ಇಂತಹ ಪುಣ್ಯ ಸ್ಥಳದಲ್ಲಿ ಜನ್ಮದಿನಾಚರಣೆ ಆಚರಿಸಿಕೊಂಡು ಮಕ್ಕಳಲ್ಲಿ ಅನಾಥಪ್ರಜ್ಞೆ ಕಾಡದೆ ನಮ್ಮ ಜೊತೆ ಇಡೀ ಸಮಾಜವೇ ಇದೆ ಎಂಬುವುದನ್ನು ಅವರಿಗೆ ಮನೋ ಧೈರ್ಯ ನೀಡುವ ಉದ್ದೇಶದಿಂದ ಪ್ರತಿವರ್ಷ ಶ್ರೀಮಠದಲ್ಲಿ ಜನ್ಮದಿನಾಚರಣೆ ಆಚರಿಸತ್ತಾ ಬಂದಿದ್ದೆನೆ. ಇಂತಹ ಅವಕಾಶ ಮಾಡಿಕೊಡುತ್ತಿರುವ ಪೂಜ್ಯರ ಹಾಗೂ ಶಾಲಾ ಶಿಕ್ಷಕರ ಕಾರ್ಯ ಅವಿಸ್ಮರಣೀಯ ಎಂದರು.
ಅನಾಥ ಮಕ್ಕಳಿಂದ ದೀಪ ಬೆಳಗಿಸಿ ಕೇಕ್ ಕತ್ತರಿಸಿ ಉಪಹಾರ ಸೇವಿಸಿದರು. ವೇದಿಕೆ ಮೇಲೆ ಮಕ್ತುಮಸಾಬ ಬಡೆಖಾನ್, ಗಂಗಪ್ಪ ಪೂಜೇರ, ಶಂಕರ್ ಪಾಶ್ಚಾಪುರ, ಬಂದೆನವಾಜ ಮುಲ್ಲಾ, ಮುಕ್ತಾರಹಮ್ಮದ ಮುಲ್ಲಾ ಇದ್ದರು.
ಸಿ.ಡಿ.ಮಾಳಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಮ್.ಎಸ್.ವಿಭೂತಿ ಸ್ವಾಗತಿಸಿದರು. ಆಯ್.ಎಸ್.ಚಿಕ್ಕನಗೌಡರ ನಿರೂಪಿಸಿದರು. ಆರ್.ಆರ್. ಅಂಗಡಿ, ಪ್ರಕಾಶ್ ಕಮ್ಮಾರ್ ವಂದಿಸಿದರು.