ದೇಶದ ಸಂಪನ್ಮೂಲ ಆರ್ಥಿಕ ಅಭಿವೃದ್ಧಿಗೆ ಕೌಶಲ್ಯ ಅಗತ್ಯ: ಬಮ್ಮನಾಳ
ಲೋಕದರ್ಶನ ವರದಿ
ರಾಣಿಬೆನ್ನೂರ 16: ದೇಶದ ಸಂಪನ್ಮೂಲ ಅಭಿವೃದ್ಧಿಯ ಜೊತೆಗೆ ಆರ್ಥಿಕ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಇಲಾಖೆಯು ಜೀವನ ಕೌಶಲ್ಯಕ್ಕೆ ಸಂಬಂಧಿಸಿದಂತೆ ನೂರಾರು ಯೋಜನೆಗಳು ಜಾರಿಯಲ್ಲಿದೆ. ಆದರೆ, ನಮ್ಮ ಭಾರತೀಯ ಯುವ ಸಮುದಾಯ ಇದರತ್ತ ಗಮನ ಹರಿಸಿ ಹುಡುಕಾಟಕ್ಕೆ ಮುಂದಾಗದೆ ಇರುವುದು ಈ ಧೇಶದ ಅತಿ ದೊಡ್ಡ ದುರಂತದ ಸಂಗತಿಯಾಗಿದೆ ಎಂದು ಆರ್ಟಿಇಎಸ್ ಮಹಾ ವಿದ್ಯಾಲಯದ ಎನ್ಎಸ್ಎಸ್ ಯೋಜನಾಧಿಕಾರಿ ಡಾ. ಸರಸ್ವತಿ ಬಮ್ಮನಾಳ ಹೇಳಿದರು.
ಅವರು ಇಲ್ಲಿನ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಕಾಲೇಜು ಆಯೋಜಿಸಿದ್ದ ಜೀವನ ಕೌಶಲ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ಯಾವುದೇ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಕೊಳ್ಳಬೇಕಾದರೆ ಅದಕ್ಕೆ ತನ್ನದೆಯಾದ ರೀತಿ, ನೀತಿ, ನಿಯಮಾವಳಿ ಇದೆ. ಜೊತೆಗೆ ಸೂಕ್ಷ್ಮ ಅವಲೋಕನವನ್ನು ಮಾಡಬೇಕಾಗುತ್ತದೆ. ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಆದರೆ ಅದನ್ನು ಹರಸಿ ಪಡೆದು ಬಳಸುವವರ ಕೊರತೆ ಇದೆ ಎಂದ ಅವರು, ಇಂದು ಸರ್ಕಾರಗಳು ಸೇರಿದಂತೆ ಅನೇಕ ವಾಣಿಜ್ಯೋಧ್ಯಮ ಬ್ಯಾಂಕುಗಳು, ಸಂಘ ಸಂಸ್ಥೆಗಳು ಕೌಶಲ್ಯ ಜೀವನವನ್ನು ರೂಪಿಸಲು ನಿರಂತರ ಪ್ರಯತ್ನಿಸುತ್ತಲಿದೆ. ಇದರ ಸದ್ಬಳಕೆ ಮಾಡಿಕೊಳ್ಳಲು ಯುವ ಸಮುದಾಯ ಮುಂದಾಗಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಜಿಲ್ಲಾ ಯು ಸ್ಪಂಧನಾ ಕೇಂದ್ರದ ಯುವ ಪರಿವರ್ತಕ ಸುಮಂಗಲಾ ಹಂಚಿನಮನಿ ಅವರು, ಯುವಕ, ಯುವತಿಯರು ಕೌಶಲ್ಯ ಹೊಂದಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅದಕ್ಕೆ ಯಾವುದೇ ಹಿಂಜರಿಕೆ ಮತ್ತು ಮಡಿವಂತಿಕೆ ಇಟ್ಟುಕೊಳ್ಳಬಾರದು, ಯಶಸ್ವಿಗೆ ಜೀವನ ಕೌಶಲ್ಯ ಬಹು ಮುಖ್ಯವಾಗಿದೆ . ಅದಕ್ಕೆ ಕಾರ್ಯಾಗಾರಗಳು ಸಹಕಾರಿಯಾಗಿವೆ ಎಂದರು.
ಬಿಎಜೆಎಸ್ಎಸ್ ಕಾರ್ಯಕ್ರಮಾಧಿಕಾರಿ ಕುಮಾರ ಬೆಣ್ಣಿ ಜೀವನ ಕೌಶಲ್ಯಗಳ ಕುರಿತು ಮಾಹಿತಿ ನೀಡಿದರು. ಕಾಲೇಜು ಪ್ರಾಚಾರ್ಯ ಡಾಽ ಸುರೇಶ ಬಣಕಾರ ಅವರು, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮಾಧಿಕಾರಿ ಬಸವರಾಜ ಮಾಳೇನಹಳ್ಳಿ, ಡಾಽ ಪುಷ್ಪಾಂಜಲಿ ಕಾಂಬಳೆ, ಗಾಯತ್ರಿ ದಾವಣಗೇರಿ, ವಿದ್ಯಾ, ಶ್ವೇತಾ ಮಾಳಗಿ, ಅಕ್ಷತಾ ಸೊಪ್ಪಿನ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.