ಶೀಗಿ ಹುಣ್ಣಿಮೆ: ಯಲ್ಲಮ್ಮ ದೇವಿ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ
ಉಗರಗೋಳ 28: ಈ ಬಾರಿ ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಆವರಿಸಿದೆ. ಆದರೆ, ಯಲ್ಲಮ್ಮನಗುಡ್ಡದಲ್ಲಿ ಶೀಗಿ ಹುಣ್ಣಿಮೆ ಅಂಗವಾಗಿ ಶನಿವಾರ ನಡೆದ ಜಾತ್ರೆಗೆ ಬರುವ ಭಕ್ತರಿಗೆ ಬರವಿರಲಿಲ್ಲ.
ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ರೈತರು ‘ಎಲ್ಲರ ಅಮ್ಮ' ಯಲ್ಲಮ್ಮ ದೇವಿ ದರ್ಶನ ಪಡೆದರು. ಮುಂಗಾರು ಹಂಗಾಮು ಕೈಕೊಟ್ಟಿದೆ. ಹಿಂಗಾರು ಹಂಗಾಮು ಕೈಹಿಡಿಯಿಲಿ ಎಂದು ತಾಯಿಯಲ್ಲಿ ಪ್ರಾರ್ಥಿಸಿದರು.
ಶುಕ್ರವಾರ ರಾತ್ರಿಯಿಂದಲೇ ಗುಡ್ಡದತ್ತ ಮುಖಮಾಡಿದ್ದ ಭಕ್ತರು, ಶನಿವಾರ ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಆದಿಶಕ್ತಿ ರೇಣುಕೆಯ ದರ್ಶನ ಪಡೆದು ಸಂಭ್ರಮಿಸಿದರು. ಎಲ್ಲಿ ನೋಡಿದರೂ ಜನಸಾಗರವೇ ಕಣ್ಣಿಗೆ ರಾಚುತ್ತಿತ್ತು. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ... ಎನ್ನುವ ಜೈಕಾರ ಮುಗಿಲು ಮುಟ್ಟಿತ್ತು. ಹಣ್ಣು, ಕಾಯಿ, ಕರ್ೂರ, ಕುಂಕುಮ-ಭಂಡಾರದ ವ್ಯಾಪಾರ ಜೋರಾಗಿತ್ತು.
ಸಂಚಾರ ನಿಯಂತ್ರಣಕ್ಕಾಗಿ ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು.
ನೆತ್ತಿ ಸುಡುವ ಬಿಸಿಲಿನ ಬೇಗೆಯ ಮಧ್ಯೆಯೂ ಬೆಳಿಗ್ಗೆಯಿಂದ ಗುಡ್ಡದ ಪ್ರದೇಶದಲ್ಲಿ ಭಕ್ತರು ಒಲೆ ಹೂಡಿದ್ದರು. ಸುಡು ಬಿಸಿಲನ್ನು ಲೆಕ್ಕಿಸದೇ ಕರಿಗಡಬು, ಹೋಳಿಗೆ, ಕರ್ಚಿಕಾಯಿ ಮತ್ತಿತರ ಖಾದ್ಯಗಳನ್ನೆಲ್ಲ ತಯಾರಿಸಿ, ಪರಡಿ ತುಂಬಿ ನೈವೇದ್ಯ ಅರ್ಿಸಿ ಭಕ್ತಿ ಸಮರ್ಿಸಿದರು. ಹಿಂದೂಗಳಲ್ಲದೇ, ಸರ್ವಧರ್ಮೀಯರು ಜಾತ್ರೆಯಲ್ಲಿ ಪಾಲ್ಗೊಂಡು ಭಾವೈಕ್ಯತೆ ಸಾರಿದರು.
ಯಾವುದೆ ಅಹಿತಕರ ಘಟನೆ ಜರುಗದಂತೆ ಡಿವಾಯ್‌ಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಕರುಣೇಶಗೌಡ ಜೆ, ಪಿಎಸ್‌ಐ ಆನಂದ ಕ್ಯಾರಕಟ್ಟಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.